ಆಂಧ್ರ ಬಸ್ ದುರಂತಕ್ಕೆ ಹೊಸ ತಿರುವು: ಅಪಘಾತಕ್ಕೂ ಮುನ್ನ ಕುಡಿದ ಮತ್ತಿನಲ್ಲಿ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದ ಸವಾರ! ಸಿಸಿಟಿವಿ ವಿಡಿಯೋ ವೈರಲ್

ಅಮರಾವತಿ: ಆಂಧ್ರ ಖಾಸಗಿ ಬಸ್ ದುರಂತಕ್ಕೂ ಮುನ್ನ ಬೈಕ್ ಸವಾರ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 20 ಜನರನ್ನು ಬಲಿತೆಗೆದುಕೊಂಡ ಭೀಕರ ಬಸ್ ದುರಂತ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಸ್ವಲ್ಪ ಮೊದಲು ಬೈಕ್ ಚಾಲಕ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವೈರಲ್ ಆಗಿದೆ.
ಪೆಟ್ರೋಲ್ ಬಂಕ್‌ವೊಂದರಲ್ಲಿ ರಾತ್ರಿ ವೇಳೆ ಬೈಕ್ ಸವಾರ ಪೆಟ್ರೋಲ್ ಹಾಕಿಸಿದ್ದಾನೆ. ಆತ ಕುಡಿದ ಮತ್ತಿನಲ್ಲಿದ್ದಂತೆ ವರ್ತಿಸಿದ್ದಾನೆ. ಸ್ಟ್ಯಾಂಡ್ ಹಾಕಿದ್ದ ಬೈಕನ್ನು ಹಾಗೆಯೇ ತಿರುಗಿಸಿ ಸ್ಟಾರ್ಟ್ ಮಾಡಿಕೊಂಡು ಅಡ್ಡಾದಿಡ್ಡಿ ಬೈಕ್ ಚಲಾಯಿಸಿರುವುದು ಕಂಡುಬಂದಿದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆಯುವ ಸ್ವಲ್ಪ ಸಮಯದ ಮೊದಲು ಬೈಕ್ ಸವಾರ ಶಿವಶಂಕರ್ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದಾನೆ. ಡಿಕ್ಕಿಯ ನಂತರ ವಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು, ಶಿವಶಂಕರ್ ಅವರ ಬೈಕನ್ನು ಸುಮಾರು 200 ಮೀಟರ್‌ಗಳಷ್ಟು ಎಳೆದೊಯ್ದಿದೆ. ಬೈಕ್‌ನಿಂದ ಘರ್ಷಣೆ ಮತ್ತು ಇಂಧನ ಸೋರಿಕೆಯಿಂದಾಗಿ ಬಸ್‌ಗೆ ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ದೃಢಪಡಿಸಿವೆ.
ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಅಪಘಾತಕ್ಕೆ ಬಸ್ ಚಾಲಕ ಮತ್ತು ಟ್ರಾವೆಲ್ ಏಜೆನ್ಸಿಯನ್ನು ದೂಷಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಲಾಗಿದೆ.