ಯೆಮೆನ್‌ನ ತ್ರಾಸದ ನಡುವೆ ನಿಮಿಷಾ ಪ್ರಿಯಾ ಬದುಕು ನಿರ್ಣಯದ ಹಂತದಲ್ಲಿ

ನವದೆಹಲಿ: ಜುಲೈ 16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆ ಮಾಡಿಸಲು ಅಥವಾ ಮರಣದಂಡನೆಯನ್ನು ತಡೆಯಲು ಸೀಮಿತ ಆಯ್ಕೆಗಳಿವೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇನ್ನೆರಡೇ ದಿನಗಳಲ್ಲಿ ನಿಮಿಷಾ ಪ್ರಿಯಾ ಅವರನ್ನು ನೇಣಿಗೇರಿಸಲಾಗುತ್ತದೆ ಎಂಬ ಕಾರಣಕ್ಕೆ ಈ ಕುರಿತಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಈ ವಿಷಯದಲ್ಲಿ ಭಾರತವು ಏನೆಲ್ಲ ಪ್ರಯತ್ನಿಸಬಹುದೋ ಈಗಾಗಲೇ ಆ ಎಲ್ಲ ಮಿತಿಯನ್ನು ತಲುಪಿದೆ ಎಂದು ಹೇಳಿದ್ದಾರೆ.

“ಭಾರತ ಸರ್ಕಾರವು ಹೆಚ್ಚಿನದನ್ನು ಏನೂ ಮಾಡಲು ಸಾಧ್ಯವಿಲ್ಲ. ಯೆಮೆನ್‌ನ ಸೂಕ್ಷ್ಮತೆಯನ್ನು ನೋಡಿದರೆ ಅದು ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ. ನಿಜವಾಗಿ ಏನು ನಡೆಯುತ್ತಿದೆ ಎಂದು ನಮಗೆ ತಿಳಿಯಲು ಯಾವುದೇ ಮಾರ್ಗವಿಲ್ಲ. ನಿಮಿಷಾ ಅವರನ್ನು ಉಳಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸಿದೆ. ಇನ್ನೂ ಪ್ರಯತ್ನ ನಡೆಯುತ್ತಿದೆ” ಎಂದು ವೆಂಕಟರಮಣಿ ಹೇಳಿದ್ದಾರೆ.
“ಭಾರತ ಸರ್ಕಾರವು ಎಲ್ಲಿಯವರೆಗೆ ಹೋಗಬಹುದೋ ನಾವು ಅದನ್ನು ತಲುಪಿದ್ದೇವೆ. ಯೆಮೆನ್ ಪ್ರಪಂಚದ ಬೇರೆ ಯಾವುದೇ ಭಾಗದಂತೆ ಅಲ್ಲ. ಸಾರ್ವಜನಿಕವಾಗಿ ಮಾತನಾಡುವ ಮೂಲಕ ನಾವು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಲು ಬಯಸಲಿಲ್ಲ. ನಾವು ಖಾಸಗಿ ಮಟ್ಟದಲ್ಲಿಯೇ ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ನಿಮಿಷಾ ಅವರ ಗಲ್ಲು ಶಿಕ್ಷೆಯನ್ನು ತಡೆಯಲು ಉಳಿದಿರುವ ಏಕೈಕ ಮಾರ್ಗವೆಂದರೆ ಬ್ಲಡ್ ಮನಿ (ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು) ಮಾತ್ರ. ಆದರೆ, ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಇದು ನಿಮಿಷಾ ಅವರ ಕುಟುಂಬದ ಖಾಸಗಿ ವಿಷಯ. ಶೆರಿಯಾ ಕಾನೂನಿನಡಿ ಇದಕ್ಕೆ ಅವಕಾಶವಿದೆ. ಆದರೆ, ಇದಕ್ಕೆ ನಿಮಿಷಾ ಅವರ ಕುಟುಂಬ ಒಪ್ಪಬೇಕಷ್ಟೆ” ಎಂದು ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ನಿಮಿಷಾ ಪ್ರಿಯಾ ಅವರ ವಕೀಲರು ಮತ್ತು ಅಟಾರ್ನಿ ಜನರಲ್ ಇಬ್ಬರಿಂದಲೂ ವಾದಗಳನ್ನು ಕೇಳಿದ ನಂತರ ಸುಪ್ರೀಂ ಕೋರ್ಟ್ ಜುಲೈ 18ರ ಶುಕ್ರವಾರದಂದು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು. “ಪ್ರಕರಣದ ಸ್ಥಿತಿಯ ಬಗ್ಗೆ ಎರಡೂ ಕಡೆಯುವರು ಮುಂದಿನ ದಿನಾಂಕದಂದು ನ್ಯಾಯಾಲಯಕ್ಕೆ ತಿಳಿಸಬಹುದು” ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ಮೂಲಗಳು ತಿಳಿಸಿರುವಂತೆ ಒಂದುವೇಳೆ ಜುಲೈ 16ಕ್ಕೆ ನಿಮಿಷಾ ಪ್ರಿಯಾ ಅವರನ್ನು ನೇಣಿಗೇರಿಸುವುದು ನಿಜವಾದರೆ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ವೇಳೆ ಆಕೆ ಬದುಕಿಯೇ ಇರುವುದಿಲ್ಲ.
ಯೆಮೆನ್ ಹೌತಿ ನಿಯಂತ್ರಿತ ಸನಾ ವ್ಯಾಪ್ತಿಯಲ್ಲಿ ಬರುವುದರಿಂದ ಮತ್ತು ರಾಜತಾಂತ್ರಿಕ ಅಡೆತಡೆಗಳಿಂದಾಗಿ ಆಕೆಯ ಬಿಡುಗಡೆಗಾಗಿ ಕೆಲಸ ಮಾಡುತ್ತಿರುವ ಸರ್ಕಾರಿ ಸಂಸ್ಥೆಗಳು ಮತ್ತು ಸಂಘಟನೆಗಳು ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ.
ಈ ಘಟನೆ ಹೇಗೆ ಸಂಭವಿಸಿತು ಎಂಬುದು ಕಳವಳಕ್ಕೆ ನಿಜವಾದ ಕಾರಣ ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದ್ದಾರೆ. ಆಕೆ ಗಲ್ಲಿಗೇರಿದರೆ ಅದು ತುಂಬಾ ದುಃಖಕರವಾಗಿರುತ್ತದೆ. ಇದು ತುಂಬಾ ದುರದೃಷ್ಟಕರ ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದರು.
ನಿಮಿಷಾ ಅವರನ್ನು ಉಳಿಸಲು ಏಕೈಕ ಆಯ್ಕೆಯೆಂದರೆ ಬ್ಲಡ್ ಮನಿ ಇತ್ಯರ್ಥ. ಮೃತರ ಕುಟುಂಬವು ಅದನ್ನು ಸ್ವೀಕರಿಸಲು ಸಿದ್ಧ. ನಿಮಿಷಾ ಪ್ರಿಯಾಳನ್ನು ಉಳಿಸಲು ಉಳಿದಿರುವ ಏಕೈಕ ಆಯ್ಕೆ ಬ್ಲಡ್ ಮನಿ ಇತ್ಯರ್ಥ ಎಂದು ನಿಮಿಷಾ ಪ್ರಿಯಾ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯೆಮೆನ್‌ನಲ್ಲಿ ಮರಣದಂಡನೆ ಎದುರಿಸುತ್ತಿರುವ ನಿಮಿಷಾ ಪ್ರಿಯಾಗೆ ಸಂಬಂಧಿಸಿದ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜುಲೈ 16ರಂದು ಗಲ್ಲಿಗೇರಿಸಲು ನಿಗದಿಪಡಿಸಲಾದ ಕೇರಳದ 37 ವರ್ಷದ ಭಾರತೀಯ ನರ್ಸ್‌ನ ವರದಿಗಳ ಅವರು ಈ ಪತ್ರ ಬರೆದಿದ್ದಾರೆ. “ಮಾರ್ಚ್ 24, 2025ರಂದು ಕೇಂದ್ರ ವಿದೇಶಾಂಗ ಸಚಿವರಿಗೆ ಬರೆದ ನನ್ನ ಪತ್ರವನ್ನು ಲಗತ್ತಿಸಲಾಗಿದೆ. ನಿಮಿಷಾ ಪ್ರಿಯಾ ಟಾಮಿ ಥಾಮಸ್ ಅವರ ಮರಣದಂಡನೆಯನ್ನು ಜುಲೈ 16, 2025ಕ್ಕೆ ನಿಗದಿಪಡಿಸಲಾಗಿದೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ. ಇದು ಸಹಾನುಭೂತಿಗೆ ಅರ್ಹವಾದ ಪ್ರಕರಣ ಎಂಬ ಅಂಶವನ್ನು ಪರಿಗಣಿಸಿ ಪ್ರಧಾನ ಮಂತ್ರಿಗಳು ಈ ವಿಷಯವನ್ನು ಕೈಗೆತ್ತಿಕೊಂಡು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಧ್ಯಪ್ರವೇಶಿಸಿ ನಿಮಿಷಾ ಪ್ರಿಯಾ ಅವರ ಜೀವವನ್ನು ಉಳಿಸಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನಿಮಿಷಾ ಹಿನ್ನೆಲೆ:
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದರು. ಅವರು ತಮ್ಮ ದೈನಂದಿನ ಕೂಲಿ ಕಾರ್ಮಿಕರಾದ ಪೋಷಕರಿಗೆ ಆರ್ಥಿಕ ಸಹಾಯ ನೀಡಲು ಯೆಮೆನ್‌ಗೆ ತೆರಳಿದ್ದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು.
ಯೆಮೆನ್ ವ್ಯವಹಾರ ಕಾನೂನಿನ ಪ್ರಕಾರ ಅಲ್ಲಿ ಬ್ಯುಸಿನೆಸ್ ಪ್ರಾರಂಭಿಸಲು ವಿದೇಶಿಯೊಬ್ಬ ಸ್ಥಳೀಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ನಿಮಿಷಾ ತಲಾಲ್ ಜೊತೆ 2015ರಲ್ಲಿ ಸನಾದಲ್ಲಿ ತನ್ನ ಕ್ಲಿನಿಕ್ ಪ್ರಾರಂಭಿಸಿದರು. ಸ್ವಲ್ಪ ದಿನದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತಲಾಲ್ ನಿಮಿಷಾರ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ. ಆತನಿಂದ ನಿಮಿಷಾ ತನ್ನ ಪಾಸ್‌ಪೋರ್ಟ್ ಮರಳಿ ಪಡೆದು ಭಾರತಕ್ಕೆ ಹಿಂತಿರುಗಲು ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.
