ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕನ್ನರ ವಿರೋಧ: ಸಮೀಕ್ಷೆಯಲ್ಲಿ ಬಹಿರಂಗವಾದ ಆಘಾತಕಾರಿ ಮಾಹಿತಿ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧಕ್ಕೆ ದೇಶದೊಳಗೆ ಹೆಚ್ಚಿನ ಜನಬೆಂಬಲ ದೊರೆಯುತ್ತಿಲ್ಲ ಎಂಬುದು ಹಲವು ಸಮೀಕ್ಷೆಗಳ ಮೂಲಕ ತಿಳಿದುಬಂದಿದೆ. ಇತ್ತೀಚಿನ ದಶಕಗಳಲ್ಲಿ ಆರಂಭದಲ್ಲೇ ಜನರಲ್ಲಿ ಹೆಚ್ಚು ವಿರೋಧ ಕಂಡ ಮೊದಲ ಪ್ರಮುಖ ಸಂಘರ್ಷ ಇದಾಗಿದೆ ಎಂದು ವಿಶ್ಲೇಷಣೆಗಳು ಸೂಚಿಸಿವೆ ಎಂದು Aljazeera ವರದಿ ಮಾಡಿದೆ.
ಮಾರ್ಚ್ 9ರಂದು ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಸಮೀಕ್ಷೆಯ ಪ್ರಕಾರ, ಶೇಕಡಾ 53ರಷ್ಟು ಅಮೆರಿಕ ಮತದಾರರು ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸುವುದನ್ನು ವಿರೋಧಿಸಿದ್ದಾರೆ. ಜೊತೆಗೆ, ಅಮೆರಿಕ ಸೇನೆಯನ್ನು ನೇರ ದಾಳಿಗೆ ನಿಯೋಜಿಸುವ ಕ್ರಮಕ್ಕೆ ಶೇಕಡಾ 74ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಇಪ್ರೊಸ್ ನಡೆಸಿದ ಮತ್ತೊಂದು ಸಮೀಕ್ಷೆಯಲ್ಲಿ ಶೇಕಡಾ 43ರಷ್ಟು ಅಮೆರಿಕನ್ನರು ಅಮೆರಿಕದ ದಾಳಿಗಳನ್ನು ವಿರೋಧಿಸಿದ್ದು, ಶೇಕಡಾ 29ರಷ್ಟು ಜನರು ಮಾತ್ರ ಬೆಂಬಲಿಸಿದ್ದಾರೆ. ಉಳಿದವರು ತಮ್ಮ ಅಭಿಪ್ರಾಯದ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಲ್ಲಿಯೂ ಯುದ್ಧದ ಬಗ್ಗೆ ಭಿನ್ನಾಭಿಪ್ರಾಯಗಳು ಕಂಡುಬಂದಿವೆ. ರಾಷ್ಟ್ರೀಯ ಭದ್ರತೆಗಾಗಿ ಸೈನಿಕ ಕ್ರಮ ಅಗತ್ಯವೆಂದು ಟ್ರಂಪ್ ಸಮರ್ಥಿಸಿಕೊಂಡಿದ್ದರೂ, ಕೆಲವು ಕನ್ಸರ್ವೇಟಿವ್ ರಾಜಕೀಯ ನಾಯಕರು ಅದನ್ನು ಪ್ರಶ್ನಿಸಿದ್ದಾರೆ.
ಟಾಕ್ ಶೋ ನಿರೂಪಕ ಟಕರ್ ಕಾರ್ಲ್ಸನ್ ಯುದ್ಧವನ್ನು ತೀವ್ರವಾಗಿ ಟೀಕಿಸಿ, ಟ್ರಂಪ್ ಅವರನ್ನು ಅವರ ಸಲಹೆಗಾರರು ತಪ್ಪು ದಾರಿಗೆ ಒಯ್ದಿರಬಹುದು ಎಂದು ಹೇಳಿದ್ದಾರೆ. ಎಬಿಸಿ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಕಾರ್ಲ್ಸನ್, ಈ ಯುದ್ಧವನ್ನು ತೀವ್ರವಾಗಿ ವಿರೋಧಿಸಬೇಕಾದದ್ದು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ತಮ್ಮ”ಮೇಕ್ ಅಮೆರಿಕಾ ಗ್ರೇಟ್ ಎಗೇನ್” (MAGA) ಚಳವಳಿಯೊಂದಿಗೆ ತಾವು ಹೊಂದಾಣಿಕೆಯಾಗಿರುವುದಾಗಿ ಹೇಳಿ, ಕಾರ್ಲ್ಸನ್ ಅವರ ಟೀಕೆಯನ್ನು ತಳ್ಳಿ ಹಾಕಿದರು.
ಆದರೂ, ಈ ಯುದ್ಧಕ್ಕೆ ಸಾರ್ವಜನಿಕ ಬೆಂಬಲ ಪಡೆಯುವುದು ಟ್ರಂಪ್ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಸೈನಿಕ ಕ್ರಮ ಏಕೆ ಅಗತ್ಯವಾಯಿತು ಎಂಬುದನ್ನು ಆಡಳಿತ ಹಲವು ಕಾರಣಗಳ ಮೂಲಕ ಸಮರ್ಥಿಸುತ್ತಿದೆ.
ಟ್ರಂಪ್ ಒಂದು ಸಾರ್ವಜನಿಕ ಭಾಷಣದಲ್ಲಿ ಇರಾನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ “ಪರಮಾಣು ಯುದ್ಧ ಸಂಭವಿಸಬಹುದಿತ್ತು” ಎಂದು ಎಚ್ಚರಿಸಿದ್ದಾರೆ. ಜೊತೆಗೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕಡಿಮೆ ಮಾಡಲು ನಡೆದ ಮಾತುಕತೆಗಳು ಫಲ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಈ ಮಾತುಕತೆಗಳು ಒಪ್ಪಂದದ ಹಂತಕ್ಕೆ ಸಮೀಪಿಸಿದ್ದವು ಎಂದು ಹಿಂದೆ ಹೇಳಿದ್ದರು.
ಇದಕ್ಕೂ ಮೊದಲು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇರಾನ್ ವಿರುದ್ಧ ಇಸ್ರೇಲ್ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ಅಮೆರಿಕಕ್ಕೆ ಇದ್ದುದರಿಂದಲೇ ದಾಳಿ ಆರಂಭಿಸಲಾಯಿತು ಎಂದು ಹೇಳಿದ್ದರು. ಆದರೆ ನಂತರ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದರು.
ಯುದ್ಧ ಆರಂಭವಾದ ಬಳಿಕ ಏಳು ಅಮೆರಿಕ ಸೇನಾ ಸದಸ್ಯರು ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 1,348 ಇರಾನಿಯನ್ನರು ಹಾಗೂ 15 ಇಸ್ರೇಲ್ ಪ್ರಜೆಗಳು ಮೃತಪಟ್ಟಿದ್ದಾರೆ. ಹತ್ತಿರದ ಗಲ್ಫ್ ರಾಷ್ಟ್ರಗಳಲ್ಲಿ ಇನ್ನೂ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.