ಮದುವೆ ವಂಚನೆ ಆರೋಪ: ಸುಳ್ಯದ ವೈದ್ಯರ ವಿರುದ್ಧ ಮೈಸೂರು ಯುವತಿಯ ದೂರು, ಸಹೋದರನ ಬಂಧನ

ಸುಳ್ಯ: ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಈಗ ಮದುವೆಗೆ ನಿರಾಕರಿಸುತ್ತಿರುವ ಆರೋಪದ ಮೇಲೆ ಸುಳ್ಯ ತಾಲೂಕಿನ ಪಂಜ ಮೂಲದ ವೈದ್ಯರೊಬ್ಬರ ವಿರುದ್ಧ ಮೈಸೂರಿನ ಯುವತಿಯೊಬ್ಬರು ದೂರು ದಾಖಲಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಯುವತಿ ವೈದ್ಯರಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಅನಂತರ ರಿಜಿಸ್ಟರ್ಡ್ ವಿವಾಹವಾಗಿದ್ದು, ಇದೀಗ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ದೂರು ದಾಖಲು ಮಾಡಲಾಗಿದೆ.
ಪಂಜ ಮೂಲದ ಡಾ| ಆದರ್ಶ್ ಎಂಬವರು ಫೇಸ್ಬುಕ್ ಮೂಲಕ ತನ್ನನ್ನು ಪರಿಚಯಿಸಿ ವಿವಾಹದ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ ರಿಜಿಸ್ಟರ್ಡ್ ವಿವಾಹವಾಗಿದ್ದರು. ಆದರೆ ಇದೀಗ ವಿವಾಹಕ್ಕೆ ತಮ್ಮ ತಂದೆ ತಾಯಿಯ ವಿರೋಧವಿದೆ ಎನ್ನುವ ಕಾರಣ ನೀಡಿ ನನ್ನನ್ನು ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
ಡಾ| ಆದರ್ಶ್, ಇವರ ತಂದೆ ವೆಂಕಟರಮಣ ಭಟ್, ತಾಯಿ ಶಶಿಕಲಾ, ಸಹೋದರರಾದ ಆದಿತ್ಯ ಭಟ್, ರಜಿತ್ ಭಟ್ ವಿರುದ್ಧವೂ ಕಾನೂನು ಕ್ರಮ ಜರಗಿಸಲು ದೂರಿನಲ್ಲಿ ಕೋರಲಾಗಿದೆ. ಈ ಪ್ರಕರಣ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದಾಖಲು ಮಾಡಲಾಗಿತ್ತು. ಅನಂತರ ಹೆಚ್ಚಿನ ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಹೈಕೋರ್ಟ್ ಆದೇಶದ ಮೇರೆಗೆ ಈ ಪ್ರಕರಣವನ್ನು ಮೈಸೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಡಾ| ಆದರ್ಶ್ ಹಾಗೂ ಅವರ ಕುಟುಂಬ ನಿರೀಕ್ಷಣ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾನೂನಾತ್ಮಕ ಪರಿಹಾರ ದೊರೆತಿಲ್ಲ.
ಮೈಸೂರು ಪೊಲೀಸರಿಂದ ಸಹೋದರನ ಸೆರೆ
ವೈದ್ಯ ಡಾ| ಆದರ್ಶರವರ ವಿರುದ್ಧ ಮೈಸೂರಿನ ಯುವತಿ ನೀಡಿರುವ ದೂರಿಗೆ ಸಂಬಂಧಿಸಿ ವೈದ್ಯನ ಸಹೋದರ ಪಂಜ ಕರಿಕ್ಕಳದ ರಜಿತ್ ಭಟ್ ಎಂಬವರನ್ನು ಮೈಸೂರು ಪೋಲೀಸರು ಮಂಗಳವಾರ ಸಂಜೆ ಸುಳ್ಯದಲ್ಲಿ ಬಂಧಿಸಿದ್ದಾರೆ. ರಜಿತ್ ಭಟ್ ಸುಳ್ಯದ ಹಳೆಗೇಟು ಬಳಿ ಹೊಟೇಲ್ಗೆ ತೆರಳುತಿದ್ದ ವೇಳೆ ಖಾಸಗಿ ಕಾರಿನಲ್ಲಿ ಬಂದಿದ್ದ ಮೈಸೂರಿನ ಸುಮಾರು ನಾಲ್ವರಿದ್ದ ಪೊಲೀಸರ ತಂಡ ಸಿನಿಮೀಯ ರೀತಿಯಲ್ಲಿ ಅವರನ್ನು ತಮ್ಮ ವಶಕ್ಕೆ ಪಡೆದು ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.