ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯಕ್ಕೆ ಅಲಹಾಬಾದ್ ಹೈಕೋರ್ಟ್ ಗಂಭೀರ ಟೀಕೆ; ಕುಂಭಮೇಳ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಲು ಸೂಚನೆ

ಅಲಹಾಬಾದ್: ಪ್ರಯಾಗ್ ರಾಜ್ ನಲ್ಲಿ ಆಯೋಜನೆಗೊಂಡಿದ್ದ ಮಹಾ ಕುಂಭಮೇಳದಲ್ಲಿ ಜನವರಿ 29ರ ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ವಿಳಂಬ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್‌ನ ರಜಾಕಾಲದ ನ್ಯಾಯಪೀಠ, ರಾಜ್ಯ ಸರಕಾರದ ವರ್ತನೆಯು ಅಸಹನೀಯವಾಗಿದ್ದು, ನಾಗರಿಕರ ಸಂಕಷ್ಟದೆಡೆಗಿನ ಸರಕಾರದ ನಿರ್ಲಕ್ಷ್ಯ ಧೋರಣೆಯ ಪ್ರತಿಫಲನವಾಗಿದೆ ಎಂದು ಕಟುವಾಗಿ ಟೀಕಿಸಿದೆ.

ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬಲಿಯಾಗಿದ್ದ ತನ್ನ ಪತ್ನಿಯ ಸಾವಿಗೆ ಪರಿಹಾರ ನೀಡಬೇಕು ಎಂದು ಮೃತ ಮಹಿಳೆಯೊಬ್ಬರ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, “ಸರಕಾರ ಪರಿಹಾರ ಘೋಷಿಸಿದ ಬಳಿಕ, ಸಕಾಲಿಕ ಹಾಗೂ ಘನತೆಯ ಪರಿಹಾರ ಪಾವತಿ ಮಾಡುವುದು ಅದರ ಆದ್ಯ ಕರ್ತವ್ಯವಾಗಿದೆ” ಎಂದು ಉತ್ತರ ಪ್ರದೇಶ ಸರಕಾರಕ್ಕೆ ಚಾಟಿ ಬೀಸಿತು.
ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಸಂತ್ರಸ್ತರೊಬ್ಬರ ಮೃತ ದೇಹವನ್ನು ಪ್ರಯಾಗ್ ರಾಜ್ ನ ಸರಕಾರಿ ಮೋತಿಲಾಲ್ ನೆಹರೂ ವೈದ್ಯಕೀಯ ಕಾಲೇಜು ಯಾವುದೇ ವೈದ್ಯಕೀಯ ತಪಾಸಣೆ ಅಥವಾ ಮರಣೋತ್ತರ ಪರೀಕ್ಷೆ ನಡೆಸದೆ ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿರುವ ಕ್ರಮದ ಕುರಿತೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಮಹಿಳೆಯ ಮೃತ ದೇಹವನ್ನು ಫೆಬ್ರವರಿಯಲ್ಲೇ ಆಕೆಯ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದ್ದರೂ, ಮೃತ ಮಹಿಳೆಯ ಕುಟುಂಬಕ್ಕೆ ಇದುವರೆಗೂ ಪರಿಹಾರ ವಿತರಿಸದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಅರ್ಜಿಯನ್ನು ಸರಕಾರಿ ಪ್ರಾಧಿಕಾರಗಳ ಮನವಿ ಎಂದು ಪರಿಗಣಿಸಬೇಕು ಎಂದು ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿತು.
