ಹೆದ್ದಾರಿಯಲ್ಲಿ ಕಾರಿನಲ್ಲಿ ಮಹಿಳೆಯರಿದ್ದಾಗ ಕಾರು ನಿಲ್ಲಿಸುವವರೇ ಎಚ್ಚರ!

ಪುಣೆ: ದೂರ ಪ್ರಯಾಣ ಮಾಡುವಾಗ ಚಾಲಕರು ಅನಿವಾರ್ಯವಾಗಿ ಹೈವೇ ಪಕ್ಕದಲ್ಲೆಲ್ಲೋ ಗಾಡಿ ನಿಲ್ಲಿಸಿ ಚಹಾ ಕುಡಿಯುವುದು ಅಥವಾ ಮೂತ್ರ ವಿಸರ್ಜನೆಗೆ ಹೋಗುವುದು ಸಾಮಾನ್ಯ. ಆದರೆ ಕಾರಿನಲ್ಲಿ ಹೆಣ್ಣುಮಕ್ಕಳಿದ್ದರೆ ನೀವು ಈ ತಪ್ಪು ಮಾಡಲೇಬೇಡಿ. ಮಹಾರಾಷ್ಟ್ರದ ಪುಣೆಯ ದೌಂಡ್ ಜಿಲ್ಲೆಯಲ್ಲಿ ಬೆಳಗಿನ ಜಾವ ಕಾರು ಚಾಲಕ ಹೈವೇ ಪಕ್ಕದಲ್ಲಿ ಕಾರು ನಿಲ್ಲಿಸಿ ಹೋಗಿದ್ದಾಗ, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಆಯುಧಗಳನ್ನು ತೋರಿಸಿ ಬೆದರಿಕೆ ಹಾಕಿದ್ದಷ್ಟೇ ಅಲ್ಲದೆ, 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಉಳಿದ ಮೂವರು ಮಹಿಳೆಯರಿಂದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಳಗಿನ ಜಾವ 4.15ರ ಸುಮಾರಿಗೆ ಹೆದ್ದಾಯ ಭಿಗ್ವಾನ್ ಬಳಿ ಚಾಲಕ ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದರು. ಕಾರಿನಬಲ್ಲಿ 7 ಜನರಿದ್ದರು. ಚಾಲಕ, ಮೂವರು ಮಹಿಳೆಯರು, 17 ವರ್ಷದ ಇಬ್ಬರು ಬಾಲಕರು ಹಾಗೂ ಬಾಲಕಿ ಇದ್ದರು. ಅವರು ಪುಣೆ ಜಿಲ್ಲೆಯ ಜುನ್ನಾರ್ ತಹಸಿಲ್‌ನ ಹಳ್ಳಿಯ ಎರಡು ವಿಭಿನ್ನ ಕುಟುಂಬಗಳಿಗೆ ಸೇರಿದವರಾಗಿದ್ದು, ಸೋಲಾಪುರ ಜಿಲ್ಲೆಯ ದೇವಾಲಯ ಪಟ್ಟಣವಾದ ಪಂಢರಪುರಕ್ಕೆ ಹೋಗುತ್ತಿದ್ದರು.

ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನ ಬಳಿ ಬಂದು ಹರಿತವಾದ ಆಯುಧಗಳನ್ನು ತೋರಿಸಿ ಚಿನ್ನಾಭರಣಗಳನ್ನು ದೋಚಿದ್ದಾರೆ. ಹಾಗೆಯೇ 17 ವರ್ಷದ ಬಾಲಕಿಯನ್ನು ಕಾರಿನಿಂದ ಹೊರಗೆಳೆದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇದಾದ ನಂತರ ಇಬ್ಬರೂ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು.
ಘಟನೆಯ ನಂತರ, ಕಾರು ಸವಾರರು ಧೈರ್ಯ ತಂದುಕೊಂಡು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ರಸ್ತೆ ಬದಿಯಿದ್ದ ಚಹಾ ಅಂಗಡಿಯ ಮಾಲೀಕ ಈ ಘಟನೆಯನ್ನು ವೀಕ್ಷಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಎಂಟು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಅಪರಿಚಿತ ಹಲ್ಲೆಕೋರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
