ಬೌದ್ಧ ಮಠದ ಮೇಲೆ ಸೇನೆಯ ವೈಮಾನಿಕ ದಾಳಿ, 4 ಮಕ್ಕಳು ಸೇರಿ 23 ನಾಗರಿಕರು ಸಾವು!

ಮ್ಯಾನ್ಮಾರ್: ಮ್ಯಾನ್ಮಾರ್ನ (Myanmar) ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಮಕ್ಕಳು ಸೇರಿದಂತೆ 23 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾಗೈಂಗ್ ಪಟ್ಟಣದಲ್ಲಿರುವ ಲಿನ್ ಟಾ ಲು ಗ್ರಾಮದಲ್ಲಿ ಇಂದು ಮುಂಜಾನೆ ಈ ದುರಂತ ದಾಳಿ ಸಂಭವಿಸಿದೆ.

ಅಲ್ಲಿ ಆ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ತಪ್ಪಿಸಿಕೊಳ್ಳಲು 150ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದರು. ಇಂದು ರಾತ್ರಿ ನಡೆದ ದಾಳಿಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದಾರೆ, ಅವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಮಿಲಿಟರಿ ಜೆಟ್ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮಠದ ಆವರಣದೊಳಗಿನ ಕಟ್ಟಡದ ಮೇಲೆ ಬಾಂಬ್ ಹಾಕಿತು. ಇತ್ತೀಚಿನ ಘರ್ಷಣೆಯಲ್ಲಿ ಸಿಲುಕಿದ ಸ್ಥಳಾಂತರಗೊಂಡ ಗ್ರಾಮಸ್ಥರು ಈ ಮಠವನ್ನು ಆಶ್ರಯ ತಾಣವಾಗಿ ಬಳಸುತ್ತಿದ್ದರು. ಕೊಲ್ಲಲ್ಪಟ್ಟವರೆಲ್ಲರೂ ರಕ್ಷಣೆ ಬಯಸಿ ಬಂದಿದ್ದ ನಾಗರಿಕರು. 2021ರಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟಿನ ನಡುವೆ ಈ ಘಟನೆಯು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಮ್ಯಾನ್ಮಾರ್‌ನ ಸ್ವತಂತ್ರ ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾ ಆನ್‌ಲೈನ್ ಮಾಧ್ಯಮವು ಸಾವಿನ ಸಂಖ್ಯೆ 30ರಷ್ಟಿರಬಹುದು ಎಂದು ವರದಿ ಮಾಡಿದೆ. ಆ ಬಗ್ಗೆ ಯಾವುದೇ ದೃಢೀಕರಣ ಸಿಗಲಿಲ್ಲ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ವಾಯುವ್ಯಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ಮಠದಲ್ಲಿ ನಡೆದ ಘಟನೆಯ ಬಗ್ಗೆ ಮಿಲಿಟರಿ ಇನ್ನೂ ಪ್ರತಿಕ್ರಿಯಿಸಲಿಲ್ಲ.
ಫೆಬ್ರವರಿ 2021ರಲ್ಲಿ ಸೈನ್ಯವು ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್ನಲ್ಲಿ ಪ್ರಕ್ಷುಬ್ಧತೆ ನಿರ್ಮಾಣವಾಗಿದೆ.ಈ ದೇಶದ ಹೆಚ್ಚಿನ ಭಾಗಗಳು ಈಗ ಸಂಘರ್ಷದಲ್ಲಿ ಸಿಲುಕಿಕೊಂಡಿವೆ. ಸಶಸ್ತ್ರ ಪ್ರತಿರೋಧದ ಭದ್ರಕೋಟೆಯಾದ ಸಾಗೈಂಗ್ ಪ್ರದೇಶದಲ್ಲಿ ಸಶಸ್ತ್ರ ಪೀಪಲ್ಸ್ ಡಿಫೆನ್ಸ್ ಫೋರ್ಸಸ್ ಸೇರಿದಂತೆ ವಿರೋಧ ಪಡೆಗಳನ್ನು ಎದುರಿಸಲು ಸೇನೆಯು ವಾಯುದಾಳಿಗಳನ್ನು ಹೆಚ್ಚಾಗಿ ಬಳಸುತ್ತಿದೆ.
