ಏರ್ ಇಂಡಿಯಾ ವಿಮಾನ ಅಪಘಾತ: RAT ಸಕ್ರಿಯತೆ ಕಾರಣವಾಯಿತೇ?

ಅಹಮದಬಾದ್ : ಜೂ.13ರ ಅಹಮದಬಾದ್ನ ಮೇಘಾನಿನಗರದ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಜೂ.13ರಂದು ಏರ್ ಇಂಡಿಯಾ ವಿಮಾನ ಅಪಘಾತವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೊಸ ಮಾಹಿತಿವೊಂದು ಬಹಿರಂಗಗೊಂಡಿದೆ. ವಿಮಾನ ಅಪಘಾತವಾಗಲು RAT ಕಾರಣವಾಗಿದೆ ಎಂದು ಅಮೆರಿಕ ನೌಕಪಡೆಯ ಮಾಜಿ ಪೈಲಟ್ ಮತ್ತು ಪ್ರಸಿದ್ಧ ವಾಯುಯಾನ ವಿಶ್ಲೇಷಕ ಕ್ಯಾಪ್ಟನ್ ಸ್ಟೀವ್ ಸ್ಕೀಬ್ನರ್ ಹೇಳಿದ್ದಾರೆ.
ವಿಮಾನ ಅಪಘಾತದ ವೀಡಿಯೊವನ್ನು ವೀಕ್ಷಿಸಿದ ನಂತರ ವಿಮಾನದಲ್ಲಿ RAT (ರಾಮ್ ಏರ್ ಟರ್ಬೈನ್) ಸಕ್ರಿಯಗೊಳಿಸುವಿಕೆಯ ಬಗ್ಗೆ ಮಾತನಾಡಿದ್ದು, ಇದೀಗ ಇದರ ಮೇಲೆ ಹೊಸ ಚರ್ಚೆ ಹುಟ್ಟುಹಾಕಿದೆ.
ಏರ್ ಇಂಡಿಯಾದ ಬೋಯಿಂಗ್-787 ವಿಮಾನವು ಟೇಕ್ ಆಫ್ ಆದ ತಕ್ಷಣ, RAT ಅನ್ನು ಸಕ್ರಿಯಗೊಳಿಸಲಾಗಿದೆ. ಇದು ವಿಮಾನವು ಟೇಕ್ ಆಫ್ ಆದ ತಕ್ಷಣ ಕೆಲವು ಗಂಭೀರ ತೊಂದರೆಗಳನ್ನು ಎದುರಿಸುತ್ತಿದೆ ಎಂಬುದರ ದೊಡ್ಡ ಸೂಚನೆಯಾಗಿದೆ ಎಂದು ಕ್ಯಾಪ್ಟನ್ ಸ್ಟೀವ್ ಹೇಳಿದ್ದಾರೆ.
RAT ಎಂದರೇನು..?
ವೀಡಿಯೊದಲ್ಲಿ ವಿಮಾನದ ಕೆಳಗೆ ಒಂದು ಸಣ್ಣ ಪ್ರೊಪೆಲ್ಲರ್ ಗೋಚರಿಸುತ್ತಿದೆ. ಇದನ್ನು RAT (ರಾಮ್ ಏರ್ ಟರ್ಬೈನ್) ಎಂದು ಕರೆಯಲಾಗುತ್ತದೆ. ಇದು ತುರ್ತು ವ್ಯವಸ್ಥೆಯಾಗಿದ್ದು, ಇದು ಮೂರು ಸಂದರ್ಭಗಳಲ್ಲಿ ಮಾತ್ರ ಹೊರಬರುತ್ತದೆ. ಮೊದಲನೆಯದಾಗಿ ಪ್ರಮುಖ ವಿದ್ಯುತ್ ವೈಫಲ್ಯ ಉಂಟಾದರೆ, ಎರಡನೆಯದಾಗಿ ಹೈಡ್ರಾಲಿಕ್ ವ್ಯವಸ್ಥೆಯು ವಿಫಲವಾದರೆ ಅಥವಾ ಎರಡೂ ಎಂಜಿನ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಈ RAT ಸಕ್ರಿಯವಾಗಿ ಕೆಲಸ ಮಾಡುತ್ತದೆ. ಉಳಿದ ಸಂದರ್ಭದಲ್ಲಿ ವಿಮಾನದ ಕೆಳಗೆ ಪ್ರೊಪೆಲ್ಲರ್ ಗೋಚರಿಸಿಲ್ಲ. ಇದೀಗ ಇದು ಗೋಚರಿಸಿದ ಕಾರಣ ಈ ಮೂರು ಕಾರಣಗಳಲ್ಲಿ ಒಂದು ಸಂಭವಿಸಿದೆ ಎಂದು ಹೇಳಬಹುದು ಎಂದು ಕ್ಯಾಪ್ಟನ್ ಸ್ಟೀವ್ ಹೇಳಿದ್ದಾರೆ.
ವಿಮಾನ ಅಪಘಾತದ ಮೊದಲ ವೀಡಿಯೊ ಪರದೆಯ ರೆಕಾರ್ಡಿಂಗ್ ಆಗಿದ್ದು, ಯಾರೋ ಒಬ್ಬರು ಮತ್ತೊಂದು ಸಾಧನವನ್ನು ಬಳಸಿಕೊಂಡು ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ, ಇದರಿಂದಾಗಿ ಪ್ರಮುಖ ವಿವರಗಳು ತಪ್ಪಿಹೋಗಿವೆ. ಈಗ, ಮೂಲ ವೀಡಿಯೊ ಕಾಣಿಸಿಕೊಂಡ ನಂತರ, ತನಿಖೆಯ ದಿಕ್ಕು ಬದಲಾಗಿದೆ ಎಂದಿದ್ದಾರೆ.
RAT ಸಕ್ರಿಯಗೊಂಡಾಗ ಮತ್ತು ಅದು ಹೊರಬಂದಾಗ, ವಿಶೇಷ ರೀತಿಯ ಧ್ವನಿ ಉತ್ಪತ್ತಿಯಾಗುತ್ತದೆ ಎಂದು ಕ್ಯಾಪ್ಟನ್ ಸ್ಟೀವ್ ಹೇಳಿದ್ದಾರೆ. ಇನ್ನು ಇವರ ಈ ವರದಿಗೆ ಇಂಬು ನೀಡುವಂತೆ ಅಪಘಾತದಿಂದ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಕೂಡ ಅಪಘಾತಕ್ಕೆ ಸ್ವಲ್ಪ ಮೊದಲು, ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ಹೇಳಿದ್ದಾರೆ.