ಎಐ ವಿಡಿಯೋ ವಿವಾದ: ಪ್ರಧಾನಿ ಮೋದಿಯವರನ್ನು ‘ಚಾಯ್‌ವಾಲಾ’ ಎಂದು ಅಪಹಾಸ್ಯ, ಕಾಂಗ್ರೆಸ್ ನಾಯಕಿ ವಿರುದ್ಧ ಬಿಜೆಪಿ ಆಕ್ರೋಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಚಹಾ (Tea) ಮಾರಾಟ ಮಾಡುತ್ತಿರುವುದನ್ನು ತೋರಿಸುವ ಎಐ ಆಧಾರಿತ ವೀಡಿಯೋವನ್ನು (AI Video) ಕಾಂಗ್ರೆಸ್ ನಾಯಕಿಯೊಬ್ಬರು ಹಂಚಿಕೊಂಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ಹುದ್ದೆಯ ಘನತೆ, ಗೌರವವನ್ನು ಕಾಂಗ್ರೆಸ್ (Congress) ದುರುಪಯೋಗಪಡಿಸಿಕೊಂಡು ಅವಮಾನಿಸುತ್ತಿದೆ ಎಂದು ಬಿಜೆಪಿ (BJP) ನಾಯಕರು ಖಂಡಿಸಿದ್ದಾರೆ.

ವೀಡಿಯೋವನ್ನು ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ (Ragini Nayak) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಇದನ್ನು ಯಾರು ಮಾಡಿದರು? ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಪ್ರಧಾನಿಯವರು ತಿಳಿ ನೀಲಿ ಬಣ್ಣದ ಕೋಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ, ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಕೆಟಲ್ ಮತ್ತು ಟೀ ಗ್ಲಾಸ್ ಹಿಡಿದುಕೊಂಡು ಚಾಯ್ ಬೇಕಾ ಚಾಯ್ ಎಂದು ಕೇಳಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಹಿನ್ನೆಲೆಯಲ್ಲಿ ಬೇರೆ ದೇಶಗಳ ಧ್ವಜಗಳು ಮತ್ತು ಭಾರತದ ತ್ರಿವರ್ಣ ಧ್ವಜವಿದೆ. ಪ್ರಧಾನಿ ಮೋದಿ ಅವರ ಧ್ವನಿಯನ್ನು ಅನುಕರಿಸುವ ಧ್ವನಿಯೊಂದು ‘ಚಾಯ್ ಬೋಲೋ, ಚಾಹಿಯೇ’ (ಯಾರಿಗಾದರೂ ಚಹಾ ಬೇಕಾ) ಎಂದು ಹೇಳುವುದನ್ನು ಕೇಳಬಹುದು
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ರೇಣುಕಾ ಚೌಧರಿ ಸಂಸತ್ತು ಮತ್ತು ಶಿವಸೇನೆಯನ್ನು ಅವಮಾನಿಸಿದ ನಂತರ, ಈಗ ರಾಗಿಣಿ ನಾಯಕ್ ಪ್ರಧಾನಿ ಮೋದಿ ಅವರ ‘ಚಾಯ್‌ವಾಲಾ’ ಹಿನ್ನೆಲೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹೇಳಿದರು. ಸಾಮಾನ್ಯ ಹಿನ್ನೆಲೆಯಿಂದ ಬಂದ ಒಬಿಸಿ ಸಮುದಾಯದ ಕಠಿಣ ಪರಿಶ್ರಮಿ ಪ್ರಧಾನಿಯನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಅವರ ಚಹಾ ಮಾರಾಟದ ದಿನಗಳನ್ನು ತೆಗೆದುಕೊಂಡು 150ಕ್ಕೂ ಹೆಚ್ಚು ಬಾರಿ ಅವರನ್ನು ನಿಂದಿಸಿದ್ದಾರೆ. ಬಿಹಾರದಲ್ಲಿ ಅವರ ತಾಯಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.