AI ಜನರೇಟೆಡ್ ನಕಲಿ ವಿಡಿಯೋಗಳ ಹಾವಳಿ: ಯೂಟ್ಯೂಬ್ ವಿರುದ್ಧ ಅಭಿಷೇಕ್-ಐಶ್ವರ್ಯಾ ದೂರು, ₹4 ಕೋಟಿ ಪರಿಹಾರಕ್ಕೆ ಬೇಡಿಕೆ

ಸಿನಿಮಾ ತಾರೆಯರ ಹಲವಾರು ವಿಡಿಯೋಗಳು, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂಟರ್ನೆಟ್ನ ಹಲವು ಸ್ಪೇಸ್ನಲ್ಲಿ ಹರಿದಾಡುತ್ತಲೇ ಇರುತ್ತವೆ. ನಟ-ನಟಿಯರ ಸಿನಿಮಾ ದೃಶ್ಯಗಳು, ಅವರ ಖಾಸಗಿ ಕಾರ್ಯಕ್ರಮ ಹೀಗೆ ಹಲವಾರು ವಿಚಾರಗಳ ಬಗ್ಗೆ ದಿನಕ್ಕೆ ಸಾವಿರಾರು ವಿಡಿಯೋಗಳು ಯೂಟ್ಯೂಬ್ಗೆ ಅಪ್ಲೋಡ್ ಆಗುತ್ತಲೇ ಇರುತ್ತವೆ.

ಸಿನಿಮಾ ಮಂದಿಗೆ ಯೂಟ್ಯೂಬ್ ಒಂದು ಪ್ರಚಾರ ಮಾಧ್ಯಮವೂ ಹೌದು. ಆದರೆ ಈಗ ಬಾಲಿವುಡ್ನ ತಾರಾ ಜೋಡಿಯಾಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರುಗಳು ಯೂಟ್ಯೂಬ್ ವಿರುದ್ಧವೇ ಮೊಕದ್ದಮೆ ದಾಖಲಿಸಿದ್ದಾರೆ ಮಾತ್ರವಲ್ಲದೆ ನಾಲ್ಕು ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇರಿಸಿದ್ದಾರೆ.
ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರ ಹಲವಾರು ವಿಡಿಯೋಗಳು ಯೂಟ್ಯೂಬ್ನಲ್ಲಿ ಈಗಾಗಲೇ ಲಭ್ಯವಿದೆ. ಆದರೆ ಇತ್ತೀಚೆಗೆ ಎಐ ಬಳಸಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸುಳ್ಳು ವಿಡಿಯೋಗಳನ್ನು ಸೃಷ್ಟಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಅದರಲ್ಲೂ ಯೂಟ್ಯೂಬ್ನಲ್ಲಿ ಈ ರೀತಿಯ ನಕಲಿ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇದೀಗ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರುಗಳು ಯೂಟ್ಯೂಬ್ನ ಮಾತೃಸಂಸ್ಥೆ ಆಗಿರುವ ಗೂಗಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇತ್ತೀಚೆಗಷ್ಟೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರುಗಳು ನ್ಯಾಯಾಲಯದ ಮೊರೆ ಹೋಗಿ ತಮ್ಮ ವ್ಯಕ್ತಿತ್ವದ ಹಕ್ಕನ್ನು ಪಡೆದುಕೊಂಡಿದ್ದಾರೆ. ತಮ್ಮ ಚಿತ್ರ, ಧ್ವನಿ, ಹೆಸರು, ವ್ಯಕ್ತಿತ್ವ, ಹಾವಭಾವದ ನಕಲುಗಳನ್ನು ಅವರ ಅನುಮತಿ ಇಲ್ಲದೆ ಎಲ್ಲಿಯೂ ಬಳಸುವಂತಿಲ್ಲ. ಅದರ ಬೆನ್ನಲ್ಲೆ ತಮ್ಮ ಅನುಮತಿ ಇಲ್ಲದೆ ಅಪ್ಲೋಡ್ ಆಗಿರುವ ವಿಡಿಯೋಗಳನ್ನು ತೆಗೆಯುವಂತೆ ಯೂಟ್ಯೂಬ್ಗೆ ಮನವಿ ಸಹ ಮಾಡಿದ್ದರು. ಆದರೆ ಇತ್ತೀಚೆಗೆ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರುಗಳ ಎಐ ವಿಡಿಯೋಗಳು ಒಂದರ ಹಿಂದೊಂದು ಬಿಡುಗಡೆ ಆದ ಬೆನ್ನಲ್ಲೆ ಇದೀಗ ದೆಹಲಿ ಹೈಕೋರ್ಟ್ನಲ್ಲಿ ಗೂಗಲ್ ಹಾಗೂ ಯೂಟ್ಯೂಬ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ತಮಗೆ ಆಗಿರುವ ನಷ್ಟಕ್ಕೆ 4.50 ಲಕ್ಷ ಡಾಲರ್ ಅಂದರೆ ನಾಲ್ಕು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋಗಳಲ್ಲಿ ಲೈಂಗಿಕತೆಯ ಅಂಶಗಳು ಇದೆಯೆಂದು ದಂಪತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ ‘ಎಐ ಬಾಲಿವುಡ್ ಇಷ್ಕ್’ ಹೆಸರಿನ ಯೂಟ್ಯೂಬ್ ಚಾನೆಲ್ನ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್ನಲ್ಲಿ 259 ಎಐ ಜನರೇಟೆಡ್ ವಿಡಿಯೋಗಳಿದ್ದು ಬಹುತೇಕ ವಿಡಿಯೋಗಳು ಬಾಲಿವುಡ್ ನಟ-ನಟಿಯರ ಬಗೆಗೆ ಆಗಿದೆ. ವಿಡಿಯೋಗಳಲ್ಲಿ ಅಶ್ಲೀಲ ಭಾಷೆ, ಚಿತ್ರಗಳನ್ನು ಸಹ ಬಳಸಲಾಗಿದೆ.
ದಂಪತಿ ದಾಖಲಿಸಿರುವ ದೂರಿನಲ್ಲಿ ಯೂಟ್ಯೂಬ್ನ ವಿಡಿಯೋ ಹಾಗೂ ಪ್ರೈವಸಿ ಪಾಲಿಸಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಲಾಗಿದ್ದು, ಈ ಪಾಲಿಸಿಗಳು ವ್ಯಕ್ತಿಯ ಖಾಸಗಿತನ ಹಕ್ಕುಗಳಿಗೆ ಅನುಗುಣವಾಗಿಲ್ಲ ಎಂದು ಸಹ ವಾದಿಸಲಾಗಿದೆ.