ಡಿಜಿಟಲ್ ಜಾಲ: ಖಾಸಗಿ ಚಿತ್ರ ಹಂಚಿ ಅಪಾಯಕ್ಕೆ ಸಿಲುಕಿದ ಮಕ್ಕಳು

ಬೆಂಗಳೂರು: ಆನ್ ಲೈನ್ ಅಥವಾ ಇಂಟರ್ನೆಟ್ ಇಂದು ಅಪಾಯಕಾರಿ ಹಂತಕ್ಕೆ ಬಂದು ತಲುಪಿದೆ. ಅದರಲ್ಲೂ ಹದಿಹರೆಯದ ಮಕ್ಕಳ ಪಾಲಿಗೆ ಇದು ವಿಷಕಾರಿಯಾಗ್ತಿದೆ. ಆನ್ ಲೈನ್ ನಲ್ಲಿ ಸಕ್ರಿಯವಾಗಿರುವ ಮಕ್ಕಳು ಅಪರಿಚಿತರ ಸಂಪರ್ಕವನ್ನು ಗಳಿಸಿ, ಅವರೊಂದಿಗೆ ತಮ್ಮ ನಗ್ನ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇಂತಹದೊಂದು ಆತಂಕಕಾರಿ ವಿಚಾರವನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ.
‘ಬೈಲ್ಡ್ ಫಂಡ್ ಇಂಡಿಯಾ’ ಹಾಗೂ ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ವು ಕಳೆದ ಒಂದು ವರ್ಷದಲ್ಲಿ ಈ ಬಗ್ಗೆ ರಾಜ್ಯದ 5 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿತ್ತು. ಈ ಅಧ್ಯಯನದಲ್ಲಿ ಕೆಲವೊಂದು ಬೆಚ್ಚಿ ಬೀಳಿಸುವ ವಿಚಾರಗಳು ಬಹಿರಂಗವಾಗಿದೆ. ಅದರಲ್ಲೂ ಹರಿಹರೆಯದ ಮಕ್ಕಳು ಆನ್ ಲೈನ್ ನಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸಿ ಅವರ ಕೋರಿಕೆ ಮೇರೆಗೆ ತಮ್ಮ ಖಾಸಗಿ ಫೋಟೋ, ವಿಡಿಯೋ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹೆಣ್ಣು, ಗಂಡು ವ್ಯತ್ಯಾಸ ಇಲ್ಲ!
ಖಾಸಗಿ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಿರುವರಲ್ಲಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ ಎಂಬುವುದನ್ನು ವರದಿ ಬಹಿರಂಗಗೊಳಿಸಿದೆ. ಶೇ 1 ರಷ್ಟು ಗಂಡು ಮಕ್ಕಳು ಹಾಗೂ ಶೇ 1 ರಷ್ಟು ಹೆಣ್ಣು ಮಕ್ಕಳು ಅಪರಿಚಿತರಿಗೆ ತಮ್ಮ ಖಾಸಗಿ ಫೋಟೋ, ವಿಡಿಯೋ ಕಳಿಸುತ್ತಾರೆ. ಇದರಿಂದ ಹಲವು ಸಂದರ್ಭದಲ್ಲಿ ಅಪಾಯಕ್ಕೆ, ಬ್ಲ್ಯಾಕ್ ಮೇಲ್ ಗೂ ಒಳಗಾಗಿದ್ದಾರೆ.
ಅಧ್ಯಯನ ತಂಡ 15 ರಿಂದ 18 ವರ್ಷದೊಳಗಿನ 312 ಮಕ್ಕಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದೆ. ಈ ಪೈಕಿ 16 ರಷ್ಟು ಮಕ್ಕಳು ಅರಿವಿದ್ದೇ ತಮ್ಮ ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಧ್ಯಯನ ತಂಡಕ್ಕೆ ಸಿಕ್ಕ ಮಾಹಿತಿಗಳ ಪ್ರಕಾರ ಆನ್ ಲೈನ್ ನಲ್ಲಿ ಪರಿಚಿತರಾದ ಅಪರಿಚಿತರನ್ನು 6 ಮಂದಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. 4 ಮಂದಿ ನಗ್ನ ವಿಡಿಯೋ ಕಳಿಸಿದ್ದಾರೆ. ಇಂತಹ ನಡೆಗಳಿಂದ ಹಲವು ಮಕ್ಕಳು ಅಪಾಯಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಇಂತಹ ನಡೆಗಳಿಂದ ಶೇ 42 ಮಕ್ಕಳು ಲೈಂಗಿಕ ದಬ್ಬಾಳಿಕೆಗೆ ಒಳಗಾಗಿದ್ದಾರೆ. ಶೇ 43 ರಷ್ಟು ಮಕ್ಕಳು ಬೆದರಿಸುವಿಕೆಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಸ್ವರೂಪದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ.
ಆನ್ ಲೈನ್ ಅಪಾಯದ ಬಗ್ಗೆ ಹೊರಟ್ಟಿ ಆತಂಕ
ಇನ್ನು ವರದಿ ಬಿಡುಗಡೆಯ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ಆಗುತ್ತಿರುವ ಅಪಾಯದ ಬಗ್ಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಆತಂಕವನ್ನು ಹೊರಹಾಕಿದ್ದಾರೆ. ಘಟನೆಯೊಂದನ್ನು ಉಲ್ಲೇಖಿಸಿದ ಅವರು, ಫೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಮಕ್ಕಳು ಮದ್ಯವನ್ನು ತರಿಸಿ ಪಾರ್ಟಿ ಮಾಡಿದ ಪ್ರಸಂಗವನ್ನು ತೆರೆದಿಟ್ಟರು. ಮಕ್ಕಳಲ್ಲಿ ಆನ್ ಲೈನ್ ಚಟ ಹೆಚ್ಚಾಗಲು ಫೋಷಕರೇ ಕಾರಣ. ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ ಎಂದು ಸಲಹೆ ನೀಡಿದರು.