ಸಿದ್ದರಾಮಯ್ಯ ಪರ ಅಹಿಂದ ಸಮಾವೇಶ: ಜ. 25ಕ್ಕೆ ದಿನಾಂಕ ಫಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಫೈಟ್ ಮಧ್ಯೆ ಅಹಿಂದ ಸಮಾವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿ 25 ರಂದು ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಘೋಷಣೆ ಮಾಡಿದೆ.


ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಅಹಿಂದ ಸಮುದಾಯಗಳು ನಿಂತಿದ್ದು, ಸಿದ್ದರಾಮಯ್ಯರನ್ನು ಬದಲಾಯಿಸದಂತೆ ಒತ್ತಡ ಹೇರಲು ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಅಹಿಂದ ಸಮಾವೇಶಕ್ಕೆ ಮಹೂರ್ತಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತುಕೊಳ್ಳುವುದಕ್ಕೆ ಅಹಿಂದ ನಾಯಕರು ಮುಂದಾಗಿದ್ದಾರೆ.

ಕುರ್ಚಿ ಕದನದ ನಡುವೆ ಸಿದ್ದರಾಮಯ್ಯ ಬೆಂಬಲಿಗರು ಹೊಸ ಅಸ್ತ್ರ ಪ್ರಯೋಗ ಮಾಡಲಿದ್ದು, ಜನವರಿ 25 ಕ್ಕೆ ಅಹಿಂದ ಸಮಾವೇಶ ನಡೆಯಲಿದೆ ಎನ್ನಲಾಗಿದೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಹಿಂದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಅಹಿಂದ ಮೈಸೂರು ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಸಮುದಾಯಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಶಿವರಾಮ್ ತಿಳಿಸಿದ್ದಾರೆ.

ಸ್ವಾರ್ಥ ಹಿತಾಸಕ್ತಿಗಳು ಮತ್ತು ಪ್ರಬಲ ಸಮುದಾಯಗಳು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿವೆ. ಅವರು ರಾಜ್ಯದಲ್ಲಿ ಕೋಮುವಾದ ಮತ್ತು ಆರ್ಎಸ್ಎಸ್ ಚಟುವಟಿಕೆಗಳ ವಿರುದ್ಧ ಗೋಡೆಯಂತೆ ನಿಂತಿದ್ದಾರೆ.