Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಗುಂಬೆ ಸಂಶೋಧನಾ ಕೇಂದ್ರಗಳ ಅಕ್ರಮ: ಅರಣ್ಯ ಇಲಾಖೆಯಿಂದ ವರದಿ ಸಲ್ಲಿಕೆ

Spread the love

ಕಾರ್ಕಳ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಆಗುಂಬೆಯಲ್ಲಿರುವ ವನ್ಯಜೀವಿ ಸಂಬಂಧಿತ ಸಂಶೋಧನ ಕೇಂದ್ರಗಳ ವಿರುದ್ಧ ಕೇಳಿಬಂದಿದ್ದ ಆರೋಪಗಳ ಸಂಬಂಧ ಅರಣ್ಯ ಇಲಾಖೆಯ ಕಾರ್ಕಳ ಅಧಿಕಾರಿಗಳು ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.

ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ಉಪ ಸಂರಕ್ಷಣಾಧಿಕಾರಿ (ಡಿಎಫ್‌ಒ) ಶಿವರಾಮ್‌ ಬಾಬು ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ವನ್ಯಜೀವಿಗಳ ಸಂರಕ್ಷಣೆ ಮತ್ತು ಸಂಶೋಧನೆ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ, ಪ್ರಾಣಿಗಳಿಗೆ ಹಿಂಸೆ, ಕಟ್ಟಡ ನಿರ್ಮಾಣ ಮತ್ತು ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೆಲವರಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ವರದಿಯ ಅಂಶಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವರದಿ ಸಲ್ಲಿಕೆಯನ್ನು ಖಚಿತಪಡಿಸಿರುವ ಡಿಎಫ್‌ಒ ಶಿವರಾಮ್‌ ಬಾಬು, ಆಗುಂಬೆಯಲ್ಲಿ ಎರಡು ಸಂಶೋಧನೆ ಕೇಂದ್ರಗಳ ಹೆಸರಲ್ಲಿ ಕಾರ್ಯಚಟುವಟಿಕೆ ನಡೆಯುತ್ತಿದ್ದು, ಎಆರ್‌ ಆರ್‌ ಎಸ್‌(ಆಗುಂಬೆ ರೈನ್‌ ಫಾರೆಸ್ಟ್‌ ರಿಸರ್ಚ್‌ ಸ್ಟೇಶನ್‌) ಬಗ್ಗೆ ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲಾಗಿದೆ. ಇನ್ನೊಂದು ಸಂಸ್ಥೆಗೆ ಸಂಬಂಧಿಸಿ ಶಿವಮೊಗ್ಗ ವನ್ಯಜೀವಿ ವಲಯದಿಂದ ಪತ್ರ ಬರೆದಿದ್ದು, ಅರಣ್ಯ ಭೂಮಿ ಒತ್ತುವರಿ ಕುರಿತು ಸಂಬಂಧಿಸಿರುವ ಆರೋಪದ ಮೇರೆಗೆ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ. ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ಉದಯವಾಣಿಗೆ ಪ್ರತಿಕ್ರಿಯಿಸಿರುವ ಸಚಿವ ಈಶ್ವರ ಬಿ. ಖಂಡ್ರೆ, “ವರದಿಯನ್ನು ಮೊದಲು ಪರಿಶೀಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ
ಆಗುಂಬೆ ಹೋಬಳಿ, ತಲ್ಲೂರು ಗ್ರಾಮದ ಸರ್ವೆ ನಂ. 11ರಲ್ಲಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಕಾಳಿಂಗ ಸರ್ಪ ಮತ್ತು ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಕಾರ್ಯಾಚರಿಸುವ ಸಂಸ್ಥೆಗಳು ಅಕ್ರಮವಾಗಿ ಜಮೀನು ಖರೀದಿಸಿದೆ. ಯಾವುದೇ ಸಂಶೋಧನೆಗೆ ಅರಣ್ಯ ಇಲಾಖೆ ನಿರ್ದಿಷ್ಟ ಅವಧಿಗೆ ಮಾತ್ರ ಅನುಮತಿ ನೀಡುತ್ತದೆ. ಆದರೆ ಈ ಕೇಂದ್ರಗಳಲ್ಲಿ ವರ್ಷವಿಡೀ ಸಂಶೋಧನೆಯ ಹೆಸರಿನಲ್ಲಿ ಛಾಯಾಗ್ರಹಣ ಸೇರಿದಂತೆ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅರಣ್ಯ ಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದರು.

ವನ್ಯಜೀವಿಗಳಿಗೆ ಶೋಷಣೆ
ಕಾಳಿಂಗ ಸರ್ಪಗಳ ಸೆರೆ ಮತ್ತು ರಕ್ಷಣೆಯ ಹೆಸರಿನಲ್ಲಿ ಅವುಗಳ ಮತ್ತು ಮೊಟ್ಟೆಗಳನ್ನು ಇಟ್ಟುಕೊಂಡು ಹಿಂಸೆ ಮಾಡಲಾಗುತ್ತಿದೆ. ಕಾಡಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಮೂಲಕ ಅರಣ್ಯ ಮತ್ತು ವನ್ಯಜೀವಿ ಕಾಯಿದೆಯನ್ನು ಉಲ್ಲಂ ಸಲಾಗಿದೆ. ರಾತ್ರಿವೇಳೆ ಗುಂಪುಕಟ್ಟಿಕೊಂಡು ಕಾಡುಗಳಲ್ಲಿ ಓಡಾಡುವ ಮೂಲಕ ಜೀವ ವೈವಿಧ್ಯತೆಗೆ ಅಡ್ಡಿಪಡಿಸಲಾಗುತ್ತಿದೆ. ಆಗುಂಬೆ, ಪಶ್ಚಿಮ ಘಟ್ಟದ ಒಂದು ಮಹತ್ವದ ಭಾಗವಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಇಲ್ಲಿನ‌ ಜೀವವೈವಿಧ್ಯವು ವಿಶ್ವದ ಗಮನ ಸೆಳೆದಿದೆ. ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲು ಅರ್ಹವಾಗಿದೆ. ಆದರೆ ಇಲ್ಲಿ ಅಧ್ಯಯನ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ವರದಿ ಪರಿಶೀಲನೆ
ಆಗುಂಬೆಯಲ್ಲಿ ಸಂಶೋಧನೆ ಹೆಸರಿನಲ್ಲಿ ವನ್ಯಜೀವಿಗಳ ಶೋಷಣೆ, ಅರಣ್ಯ ಭೂಮಿ ಒತ್ತುವರಿ ಸಂಬಂಧಿತ ಆರೋಪಗಳ ಬಗ್ಗೆ ದೂರು ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ, ತಪ್ಪಿತಸ್ಥರ ವಿರುದ್ಧ ಕ್ರಮದ ಶಿಫಾರಸಿನೊಂದಿಗೆ ಸಮಗ್ರ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದು, ವರದಿ ಪರಿಶೀಲಿಸಲಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *