ಸಿಂಧೂ ನದಿ ಒಪ್ಪಂದ ಅಮಾನತಿನ ಬಳಿಕ ಪಾಕಿಸ್ತಾನದಿಂದ ಪ್ಲೀಸ್ ನೀರು ಹರಿಸಿ ಎಂದು ಭಾರತಕ್ಕೆ ಪತ್ರ

ನವದೆಹಲಿ: ಅಮಾನತಿನಲ್ಲಿಟ್ಟ ಸಿಂಧೂ ನದಿ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ.

ಭಾರತ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತದ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರಾಯೋಜಿತ ಉಗ್ರರು ದಾಳಿ ನಡೆಸಿದ ಬಳಿಕ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960 ರಲ್ಲಿ ನಡೆದಿದ್ದ ಸಿಂಧೂ ನದಿ ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟಿದೆ. ಒಪ್ಪಂದವನ್ನು ಅಮಾನತಿನಲ್ಲಿಟ್ಟ ಕಾರಣ ಭಾರತ ಸಿಂಧೂ ನದಿಯ ಉಪನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಜಲಾಶಯದಿಂದ ಯಾವಾಗ ಬೇಕಾದರೂ ನೀರು ಬಿಡಬಹುದು ಮತ್ತು ಯಾವಾಗ ಬೇಕಾದರೂ ನೀರನ್ನು ತಡೆದು ಹಿಡಿಯಬಹುದು. ಒಪ್ಪಂದ ಜಾರಿಯಲ್ಲಿದ್ದಾಗ ಜಲಾಶಯದಿಂದ ನೀರನ್ನು ಹೊರಗೆ ಹರಿಸುವಾಗ ಭಾರತ ಪಾಕಿಸ್ತಾನಕ್ಕೆ ತಿಳಿಸಬೇಕಿತ್ತು. ಆದರೆ ಈಗ ಭಾರತ ತನಗೆ ಇಷ್ಟ ಬಂದ ಸಮಯದಲ್ಲಿ ನೀರನ್ನು ಜಲಾಶಯದಿಂದ ಹರಿಸುತ್ತಿದೆ.
ರಕ್ತ ಮತ್ತು ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ. ಭಯೋತ್ಪಾದಕತೆ ಮತ್ತು ಮಾತುಕತೆ ಎರಡು ಜೊತೆಯಾಗಿ ಸಾಗುವುದಿಲ್ಲ. ಉಗ್ರರ ವಿರುದ್ಧ ಪಾಕ್ ಕಠಿಣ ಕ್ರಮ ಕೈಗೊಳ್ಳುವವರೆಗೂ ಈ ಒಪ್ಪಂದ ಅಮಾನತಿನಲ್ಲಿ ಇರಲಿದೆ ಎಂದು ಭಾರತ ಹೇಳಿತ್ತು.
ಬೇಸಿಗೆಯಲ್ಲಿ ಭಾರತ ಕೆಲ ದಿನಗಳ ಕಾಲ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಆದರೆ ದೀರ್ಘ ಸಮಯದವರೆಗೆ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ಭಾರತ ಈಗ ಮತ್ತೆ ಎರಡು ಜಲಾಶಯ ನಿರ್ಮಾಣಕ್ಕೆ ಮುಂದಾಗಿದೆ.
