‘ಮಲೆ ಮಹದೇಶ್ವರ ಬೆಟ್ಟದ ನಂತರ ಮತ್ತೆ ಚಾಮರಾಜನಗರದಲ್ಲಿ ಚಿರತೆ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಶ್ವಾನದಳ ರವಾನೆ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ5 ಹುಲಿಗಳ ಸಾವಿನ ಬಳಿಕ ಇದೀಗ ಜಿಲ್ಲೆಯ ಕೊತ್ತಲವಾಡಿ ಸಮೀಪದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದ್ದು, ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಸಮೀಪದ ಪ್ರದೀಪ್ ಎಂಬುವವರ ಗಣಿ ತ್ಯಾಜ್ಯದ ಕಲ್ಲು ಸಂಗ್ರಹಿಸಿರುವ ಜಮೀನಿನಲ್ಲಿ ಸುಮಾರು 5 ವರ್ಷದ ಗಂಡು ಚಿರತೆಯ ಶವ ಪತ್ತೆಯಾಗಿದ್ದು, ಅದರ ಸಮೀಪದಲ್ಲಿಯೇ ಕರು ಹಾಗೂ ನಾಯಿಯ ಶವ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಬಿ.ಆರ್.ಟಿ ಅರಣ್ಯಾಧಿಕಾರಿಗಳಾದ ಸಿಸಿಎಫ್ ಹಿರಾಲಾಲ್, ಡಿಸಿಎಫ್ ಶ್ರೀಪತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದೀಗ ಅರಣ್ಯಾಧಿಕಾರಿಗಳು ಪ್ರಕರಣದ ಪತ್ತೆಗಾಗಿ ಬಂಡೀಪುರದಿಂದ ಶ್ವಾನ ದ್ರೋಣನನ್ನು ಕರೆತಂದಿದ್ದಾರೆ. ಜೊತೆಗೆ ಮೆಟಲ್ ಡಿಟೆಕ್ಟರ್ ಮೂಲಕವು ಪರಿಶೀಲನೆ ನಡೆಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಕೊತ್ತಲವಾಡಿ ಸಮೀಪದಲ್ಲಿ ಮೂರು ಹುಲಿಗಳು ಸಾವನ್ನಪ್ಪಿದ್ದವು. ಆಗ ಅಧಿಕಾರಿಗಳು ಸ್ವಾಭಾವಿಕವಾಗಿ ಸಾವನ್ನಪ್ಪಿರುವುದಾಗಿ ಮಾಹಿತಿ ಕೊಟ್ಟಿದ್ದರು. ಇದೀಗ ಗಣಿ ತ್ಯಾಜ್ಯದ ಮೇಲೆ ಚಿರತೆ ಸಾವನ್ನಪ್ಪಿದ್ದು, 2-3 ದಿನದ ಹಿಂದೆಯೇ ಮೃತಪಟ್ಟಿರುವುದಾಗಿ ಅನುಮಾನ ಉಂಟಾಗಿದೆ. ಸದ್ಯ ಅಧಿಕಾರಿಗಳು ಚಿರತೆ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಿಂದಿನಿಂದಲೂ ಕೂಡ ಈ ಭಾಗದಲ್ಲಿ ಚಿರತೆ ಓಡಾಟ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷಪ್ರಾಶನದಿಂದಾಗಿ 5 ಹುಲಿಗಳು ಸಾವನ್ನಪ್ಪಿದ್ದವು. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದರು
