Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕನ್ನಡ ಭಾಷೆ ಬಳಿಕ ಇದೀಗ ಸನಾತನ ಧರ್ಮದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

Spread the love

ನಟ ಕಮಲ್‌ ಹಾಸನ್‌ (Kamal Haasan) ಅವರು ಇತ್ತೀಚೆಗೆ ಕನ್ನಡ ಭಾಷೆ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿದ್ದರು. ಥಗ್‌ ಲೈಫ್‌ ಸಿನಿಮಾ (Thug Life Movie) ಆಡಿಯೋ ಲಾಂಚ್‌ ವೇಳೆ ಅವರು ಕನ್ನಡ ಹುಟ್ಟಿದ್ದೇ ತಮಿಳಿನಿಂದ ಎಂದು ಹೇಳಿದ್ದರು. ಇದು ಅವರ ಸಿನಿಮಾ ಮೇಲೆ ಕೆಟ್ಟ ಪರಿಣಾಮ ಬೀರಿತು.

ಕರ್ನಾಟಕದಲ್ಲಿ ಥಗ್‌ಲೈಫ್‌ ರಿಲೀಸ್‌ ಆಗಲೇ ಇಲ್ಲ. ಕರ್ನಾಟಕದಲ್ಲಿ ಕಮಲ್‌ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ಕನ್ನಡ ಪರ ಹೋರಾಟಗಾರರು, ಕನ್ನಡಿಗರು ಕಮಲ್‌ ವಿರುದ್ಧ ಸಿಡಿದೆದ್ದರು..ಇಷ್ಟೆಲ್ಲ ಆದ್ಮೇಲೆ ಇದೀಗ ಕಮಲ್‌ ಹಾಸನ್‌ ಅವರು ಸನಾತನ ಧರ್ಮದ ಬಗ್ಗೆ ಮಾತಾಡಿದ್ದಾರೆ. ಅವರಾಡಿದ ಮಾತುಗಳು ಅನೇಕರಿಗೆ ಇಷ್ಟವಾಗಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಕಮಲ್‌ ಹಾಸನ್‌ ವಿರುದ್ಧ ಬೈಗುಳ ಪ್ರಾರಂಭವಾಗಿದೆ..ವಿವಾದ ಭುಗಿಲೆದ್ದಿದೆ.

ಕಮಲ್‌ ಹಾಸನ್‌ ಹೇಳಿದ್ದೇನು?

ನಟ, ರಾಜಕಾರಣಿ ಕಮಲ್‌ ಹಾಸನ್‌ ಅವರು ಈಗ ಸನಾತನ ಧರ್ಮದ ಸರಪಳಿಯನ್ನ ಮುರಿಯುವ ಮಾತಾಡಿದ್ದಾರೆ. ʼಸರ್ವಾಧಿಕಾರ ಮತ್ತು ಸನಾತನ ವ್ಯವಸ್ಥೆಯ ಸರಪಳಿಗಳನ್ನು ಮುರಿಯುವ ಏಕೈಕ ಅಸ್ತ್ರವೆಂದರೆ ಶಿಕ್ಷಣʼ ಎಂದು ಹೇಳಿದ್ದಾರೆ. ಮಕ್ಕಳ್ ನೀಧಿ ಮಯ್ಯಂ ಪಾರ್ಟಿಯ ಮುಖ್ಯಸ್ಥ ಆಗಿರುವ ಕಮಲ್‌ ಹಾಸನ್‌ ಭಾನುವಾರ ಚೆನ್ನೈನಲ್ಲಿ ಅಗರಂ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಈ ಮಾತುಗಳನ್ನ ಹೇಳಿದ್ದಾರೆ. ಸನಾತನ ಧರ್ಮದ ಬಗ್ಗೆ ಕಮಲ್‌ ಹಾಸನ್‌ ಮಾತಾಡಿದ್ದು ಮತ್ತೆ ವಿವಾದದ ಬೆಂಕಿ ಹೊತ್ತಿಸಿದೆ.

ʼನಿಮ್ಮ ಕೈಯಿಗೆ ಶಿಕ್ಷಣವನ್ನ ಹೊರತುಪಡಿಸಿ ಇನ್ನೇನೂ ತೆಗೆದುಕೊಳ್ಳಬೇಡಿ. ಶಿಕ್ಷಣ ಇಲ್ಲದೆ ನಾವು ಗೆಲ್ಲಲು ಸಾಧ್ಯವೇ ಇಲ್ಲ. ಮೂರ್ಖರು ನಿಮ್ಮನ್ನ ಸೋಲಿಸಲು ಬರುತ್ತಾರೆ. ಆದರೆ ಶಿಕ್ಷಣವಿದ್ದರೆ ನಾವು ಅವರನ್ನೆಲ್ಲ ಸೋಲಿಸಬಹುದು. ಮೂರ್ಖರ ವಿರುದ್ಧ ಗೆಲ್ಲಲು ನಮಗೆ ಶಿಕ್ಷಣ ಬೇಕು. ಸರ್ವಾಧಿಕಾರ ಮತ್ತು ಸನಾತನ ಧರ್ಮದ ಸಂಕೋಲೆಯನ್ನ ಮುರಿಯಲು ಶಿಕ್ಷಣವೇ ಪ್ರಬಲ ಅಸ್ತ್ರʼ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಕಮಲ್‌ ಹಾಸನ್‌ ಅವರು ʼ2017ರಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನೀಟ್‌ ಪರಿಚಯಿಸಲಾಯಿತು. ಅದಾದ ಮೇಲೆ ವಿದ್ಯಾರ್ಥಿಗಳಿಗೆ ಅವಕಾಶಗಳು ಕಡಿಮೆಯಾಗಿವೆʼ ಎಂದು ಹೇಳಿದರು. ಇನ್ನು ಅಗರಂ ಫೌಂಡೇಷನ್‌ನ ಕೆಲಸದ ಬಗ್ಗೆ ಮಾತನಾಡಿದ ಅವರು ʼಅಗರಂ ಫೌಂಡೇಷನ್‌ ಸೇರಿ ಹಲವು ಎನ್‌ಜಿಒಗಳು ಹಣ ಮತ್ತಿತರ ಸೌಕರ್ಯಗಳನ್ನ ಸರ್ಕಾರದಿಂದ ಕೇಳುತ್ತಿಲ್ಲ. ಕೆಲಸ ಮಾಡಲು ಅನುಮತಿ ಮಾತ್ರ ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬಳಿ ನಾನು ಹೇಳಿದ್ದೇನೆ. ಎನ್‌ಜಿಒಗಳನ್ನ ಸಶಕ್ತಗೊಳಿಸಲು ಕ್ರಮ ವಹಿಸುವ ಭರವಸೆಯನ್ನ ಸಿಎಂ ನನಗೆ ನೀಡಿದ್ದಾರೆʼ ಎಂದು ತಿಳಿಸಿದ್ದಾರೆ. ʼನಾಯಕತ್ವ ಎನ್ನುವುದು ಅಧಿಕಾರದಲ್ಲಿ ಇರುವುದಲ್ಲ. ನಿಮ್ಮ ಹೆಸರು ಚಾಲ್ತಿಯಲ್ಲಿ ಇಲ್ಲದೆ ಇದ್ದರೂ, ಒಂದೊಳ್ಳೆ ಬದಲಾವಣೆಯನ್ನ ತರುವುದೇ ನಾಯಕತ್ವʼ ಎಂಬುದನ್ನ ಒತ್ತಿ ಹೇಳಿದ್ದಾರೆ.

ಸನಾತನ ಧರ್ಮದ ಬಗ್ಗೆ ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮಗ ಉದಯನಿಧಿ ಅವರು ಕೆಟ್ಟದಾಗಿ ಮಾತನಾಡಿದ್ದರು. ಆಗ ತೀವ್ರವಾದ ವಿರೋಧ ವ್ಯಕ್ತವಾಗಿತ್ತು. ಕಮಲ್‌ ಹಾಸನ್‌ ಅವರು ಇತ್ತೀಚೆಗೆ ರಾಜ್ಯ ಸಭೆಗೆ ಕಾಲಿಟ್ಟಿದ್ದಾರೆ. ಅದರ ಬೆನ್ನಲ್ಲೇ ಸನಾತನ ವ್ಯವಸ್ಥೆ ಬಗ್ಗೆ ಬಾಯಿ ಹರಿಬಿಟ್ಟಿದ್ದಾರೆ. ಅವರ ಈ ಮಾತುಗಳು ಈಗಾಗಲೇ ಚರ್ಚೆ ಹುಟ್ಟುಹಾಕಿವೆ.


Spread the love
Share:

administrator

Leave a Reply

Your email address will not be published. Required fields are marked *