ಅಮೃತಸರ್, ದೆಹಲಿ ಬಳಿಕ ಇದೀಗ ಮುಂಬೈ ಟಾರ್ಗೆಟ್ – BSE ಗೆ ಬಾಂಬ್ ಬೆದರಿಕೆಯ ಹುಸಿ ಇಮೇಲ್

ಮುಂಬೈ: ದೇಶದ ವಿವಿಧೆಡೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ವಾಣಿಜ್ಯ ನಗರಿಯಾದ ಮುಂಬೈನಲ್ಲಿ ಇರುವ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದಲ್ಲಿ 4 ಆರ್ಡಿಎಕ್ಸ್ ಬಾಂಬ್ ಇಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸ್ಫೋಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡುವ ಇಮೇಲ್ವೊಂದು ಬಂದಿದೆ. ಕಾಮ್ರೇಡ್ ಪಿಣರಾಯಿ ವಿಜಯನ್

Comrade Pinarayi Vijayan ಎನ್ನುವ ಹೆಸರಿನ ಐಡಿಯಿಂದ ಈ ಇಮೇಲ್ ಬಂದಿದೆ. ಆದರೆ, ಈ ಬಾಂಬ್ ಬೆದರಿಕೆ ಹುಸಿ ಎಂಬುದು ಅಂತಿಮವಾಗಿ ತಿಳಿದುಬಂದಿದೆ. ಈ ಅಪರಿಚಿತ ವ್ಯಕ್ತಿಯ ವಿರುದ್ಧ ಮಾತಾ ರಾಮಬಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸ್ ಸ್ಟೇಷನ್ನಲ್ಲಿ ವಿವಿಧ ಬಿಎನ್ಎಸ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ಸೋಮವಾರ (ಜುಲೈ 14) ಅಮೃತಸರ್ನ ಗೋಲ್ಡನ್ ಟೆಂಪಲ್ ಮೇಲೆ ಬಾಂಬ್ ಹಾಕಿರುವುದಾಗಿ ಇದೇ ರೀತಿ ಇಮೇಲ್ವೊಂದು ಬಂದಿತ್ತು. ಆದರೆ, ಪೊಲೀಸ್ ತಪಾಸಣೆ ವೇಳೆ ಅಂಥ ಬಾಂಬ್ ಯಾವುದೂ ಇಲ್ಲ ಎಂದು ಗೊತ್ತಾಗಿತ್ತು. ದೆಹಲಿಯಲ್ಲಿನ ಪ್ರಶಾಂತ್ ವಿಹಾರ್, ದ್ವಾರಕಾ ಸೆಕ್ಟರ್ 16 ಮತ್ತು ಚಾಣಕ್ಯಪುರಿ ಮೊದಲಾದ ಸ್ಥಳಗಳಲ್ಲಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿಯೂ ಹುಸಿ ಬೆದರಿಕೆ ಬಂದಿತ್ತು. ಕೂಡಲೇ ದೆಹಲಿ ಪೊಲೀಸರು ಕಾರ್ಯತತ್ಪರಗೊಂಡು ಶಾಲೆಗಳಿಂದ ಎಲ್ಲರನ್ನೂ ತೆರವುಗೊಳಿಸಿ ಪೂರ್ಣ ತಪಾಸಣೆ ಮಾಡಿದ್ದರು. ಯಾವ ಬಾಂಬ್ ಪತ್ತೆಯಾಗಿರಲಿಲ್ಲ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕಚೇರಿಗೆ ಬಾಂಬ್ ಬೆದರಿಕೆಯ ಇಮೇಲ್ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರೂ ಕೂಡಲೇ ಸ್ಥಳಕ್ಕೆ ಆಗಮಿಸಿ ಇಡೀ ಕಟ್ಟಡದಲ್ಲಿ ಬಾಂಬ್ಗೆ ಶೋಧಿಸಿದ್ದರು. ಕೊನೆಗೆ, ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ.
ಹುಸಿ ಬೆದರಿಕೆಯಾದರೂ ಆತಂಕದ ಕ್ಷಣಗಳು…
ಪೊಲೀಸರಿಗೆ ಸಾಕಷ್ಟು ಹುಸಿ ಬೆದರಿಕೆಯ ಕರೆಗಳು ಮತ್ತು ಇಮೇಲ್ಗಳು ಬರುತ್ತಿರುತ್ತವೆ. ಪೂರ್ಣವಾಗಿ ತಪಾಸಣೆ ಮಾಡದೇ ಅವನ್ನು ಹುಸಿ ಬೆದರಿಕೆ ಎಂದು ಪರಿಗಣಿಸಲು ಆಗುವುದಿಲ್ಲ. ಸಾರ್ವಜನಿಕ ಭದ್ರತೆ ದೃಷ್ಟಿಯಿಂದ ಪೊಲೀಸರು ಪ್ರತಿಯೊಂದು ಬೆದರಿಕೆಯನ್ನೂ ಗಂಭೀರವಾಗಿ ಪರಿಶೀಲಿಸಿ ತಪಾಸಣೆ ಮಾಡುತ್ತಾರೆ.
