ದತ್ತು ತಂದ ಮಮತೆಯ ಕೊಲೆ: 14 ವರ್ಷದ ಬಾಲಕಿ ತಾಯಿಯನ್ನೇ ಕೊಂದು – ಓಡಿಶಾದಲ್ಲಿ ದಾರುಣ ಘಟನೆ

ಬೆಂಗಳೂರು: 14 ವರ್ಷದ ದತ್ತು ಪುತ್ರಿಯೊಬ್ಬಳು ತನ್ನ ಮಲತಾಯಿಯನ್ನು ಇಬ್ಬರು ಯುವಕರ ಜೊತೆ ಸೇರಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಕೊಲೆಯಾದ ಮಹಿಳೆಯನ್ನು ಗಜಪತಿ ಜಿಲ್ಲೆಯ ಪರಲಕ್ಕಮುಂಡಿ ಪಟ್ಟಣದ 54 ವರ್ಷದ ರಾಜಲಕ್ಷ್ಮಿ ಖರ್ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ 8 ನೇ ತರಗತಿ ಬಾಲಕಿಯನ್ನು ಗಜಪತಿ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಸ್ನೇಹಿತರಾದ 21 ವರ್ಷದ ಗಣೇಶ್ ರಾತ್, 20 ವರ್ಷದ ದಿನೇಶ್ ಸಾಹು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಿತ್ರ ಎಂದರೆ 14 ವರ್ಷದ ಹಿಂದೆ ರಸ್ತೆ ಬದಿ ಬಿದ್ದಿದ್ದ ಮೂರು ದಿನದ ಹೆಣ್ಣು ಶಿಶುವನ್ನು ರಾಜಲಕ್ಷ್ಮಿ ಖರ್ ರಕ್ಷಿಸಿ ಮನೆಗೆ ತಂದು ಸಾಕಿದ್ದರು. ಅದೇ ಬಾಲಕಿ ಇದೀಗ ತನ್ನನ್ನು ಸಾಕಿ ಸಲುಹಿದ ಮಲತಾಯಿಯನ್ನೇ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಆರೋಪಿಸಿದ್ದಾರೆ.
ರಾಜಲಕ್ಷ್ಮಿ ಖರ್ ಅವರ ಬಳಿ ಚಿನ್ನಾಭರಣ ಹಾಗೂ ನಗದು ಹಣ ಇದ್ದಿದ್ದು ಬಾಲಕಿಯ ತಲೆ ಕೆಡಿಸಿತ್ತು. ಆ ವಿಷಯವನ್ನು ಬಾಲಕಿ ಗಣೇಶ್ ಹಾಗೂ ದಿನೇಶ್ ಬಳಿ ಹೇಳಿದ್ದಳು. ಅಲ್ಲದೇ ಅವರ ಜೊತೆ ಬಾಲಕಿ ಸಲುಗೆಯಿಂದ ವರ್ತಿಸುತ್ತಿದ್ದಳು. ಇದಕ್ಕಾಗಿ ರಾಜಲಕ್ಷ್ಮಿ ಅವರು ಬಾಲಕಿಗೆ ಎಚ್ಚರಿಕೆಯನ್ನೂ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹಣ ಹಾಗೂ ಬಂಗಾರದ ಆಸೆಗೆ ಬಿದ್ದ ಈ ಮೂವರೂ ಏಪ್ರಿಲ್ 29 ರಂದು ರಾಜಲಕ್ಷ್ಮಿಗೆ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಗಜಪತಿ ಎಸ್‌ಪಿ ಜೀತೇಂದ್ರ ಕುಮಾರ್ ಪಾಂಡೆ ಅವರು ತಿಳಿಸಿದ್ದಾರೆ.
ಆರಂಭದಲ್ಲಿ ಇದೊಂದು ಹೃದಯಾಘಾತ ಎಂದು ಬಿಂಬಿಸಿದ್ದ ಬಾಲಕಿ ಕುಟುಂಬದವರನ್ನು ದಿಕ್ಕು ತಪ್ಪಿಸಿದ್ದಳು. ಕೆಲದಿನಗಳ ಬಳಿಕ ರಾಜಲಕ್ಷ್ಮಿ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಅನುಮಾನ ಬಂದು ಬಾಲಕಿಯ ಮೊಬೈಲ್ ಫೋನ್ ಅನ್ನು ಪರಿಶೀಲನೆ ನಡೆಸಿದ್ದರು.
ಬಾಲಕಿ ತನ್ನ ಮಲತಾಯಿಯ ಹತ್ಯೆಯ ಸಂಚನ್ನು ಇನ್‌ಸ್ಟಾಗ್ರಾಂ ಚಾಟ್ ಮೂಲಕ ಗಣೇಶ್ ಹಾಗೂ ದಿನೇಶ್ ಜೊತೆ ನಡೆಸಿರುವುದು ಬೆಳಕಿಗೆ ಬಂದ ನಂತರ ಮಿಶ್ರಾ ಅವರು ಮೇ 14 ರಂದು ಪರಲಕ್ಕಮುಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪೊಲೀಸ್ ತನಿಖೆ ನಡೆದು ಸತ್ಯ ಹೊರಬಿದ್ದಿದೆ. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.
ಒಡಿಶಾದಲ್ಲಿ ಹಲವರು ಈ ಘಟನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ದತ್ತು ಪುತ್ರಿಯ ವರ್ತನೆಗೆ ತೀವ್ರ ಕಿಡಿಕಾರಿದ್ದಾರೆ.
