ಅದಾನಿ ಗ್ರೂಪ್ ರಕ್ಷಣೆಗೆ ₹3.9 ಶತಕೋಟಿ ಡಾಲರ್ ಯೋಜನೆ: ಮೋದಿ ಸರ್ಕಾರದ ಮೇಲೆ ‘ವಾಷಿಂಗ್ಟನ್ ಪೋಸ್ಟ್’ ವರದಿ

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಎಲ್‌ಐಸಿಯಿಂದ ಹಣವನ್ನು ವರ್ಗಾಯಿಸುವ ಮೂಲಕ ಸಾಲದ ಸುಳಿಯಲ್ಲಿ ಸಿಲುಕಿದ್ದ ಗೌತಮ ಅದಾನಿಯವರ ಉದ್ಯಮ ಸಮೂಹವನ್ನು ರಕ್ಷಿಸಲು ಮೋದಿ ಸರಕಾರವು 3.9 ಶತಕೋಟಿ ಡಾಲರ್ ಗಳ ಯೋಜನೆಯನ್ನು ಹೇಗೆ ರೂಪಿಸಿತ್ತು ಎನ್ನುವುದನ್ನು ವಾಷಿಂಗ್ಟನ್ ಪೋಸ್ಟ್‌ನ ತನಿಖಾ ವರದಿಯು ಬಯಲಿಗೆಳೆದಿದೆ.
ಮೇ 2025ರಲ್ಲಿ ಕೇಂದ್ರ ವಿತ್ತ ಸಚಿವಾಲಯ, ಅದರ ಹಣಕಾಸು ಸೇವೆಗಳ ಇಲಾಖೆ(ಡಿಎಫ್‌ಎಸ್), ಎಲ್‌ಐಸಿ ಮತ್ತು ನೀತಿ ಆಯೋಗ ಸಂಘಟಿತಗೊಂಡು ಅದಾನಿ ಗ್ರೂಪ್‌ನ ಬಾಂಡ್‌ಗಳು ಮತ್ತು ಈಕ್ವಿಟಿಯಲ್ಲಿ ಕೋಟ್ಯಂತರ ರೂ.ಗಳನ್ನು ಹರಿಸಿದ್ದ ಹೂಡಿಕೆ ಕಾರ್ಯತಂತ್ರವನ್ನು ರೂಪಿಸಿದ್ದವು ಎನ್ನುವುದನ್ನು ಪೋಸ್ಟ್‌ಗೆ ಲಭ್ಯವಾಗಿರುವ ಆಂತರಿಕ ದಾಖಲೆಗಳು ತೋರಿಸಿವೆ. ಯೋಜನೆಯು ಅದಾನಿ ಪೋರ್ಟ್ಸ್‌ಗಾಗಿ 585 ಮಿಲಿಯನ್ ಬಾಂಡ್ ವಿತರಣೆಯನ್ನು ಒಳಗೊಂಡಿದ್ದು, ಇದಕ್ಕೆ ಸಂಪೂರ್ಣ ಹಣಕಾಸನ್ನು ಎಲ್‌ಎಸಿ ಒದಗಿಸಿತ್ತು.
ಅದಾನಿ ಪೋರ್ಟ್ಸ್ ತನ್ನ ಹಾಲಿ ಸಾಲವನ್ನು ಹೊಸ ಸಾಲಕ್ಕೆ ಬದಲಿಸಲು ಬಾಂಡ್‌ಗಳನ್ನು ವಿತರಿಸುವ ಮೂಲಕ ಸುಮಾರು 585 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸುವುದು ಅಗತ್ಯವಾಗಿದ್ದ ತಿಂಗಳಲ್ಲಿಯೇ ಈ ಯೋಜನೆಯು ಕಾರ್ಯರೂಪಕ್ಕೆ ಬಂದಿತ್ತು. ಮೇ 30ರಂದು ಅದಾನಿ ಗ್ರೂಪ್ ತನ್ನ ಸಂಪೂರ್ಣ ಬಾಂಡ್ ಯೋಜನೆಗೆ ಏಕೈಕ ಹೂಡಿಕೆದಾರನಾಗಿ ಎಲ್‌ಐಸಿ ಹಣಕಾಸನ್ನು ಒದಗಿಸಿದೆ ಎಂದು ಪ್ರಕಟಿಸಿತ್ತು. ಇದರ ಬೆನ್ನಿಗೇ ಈ ವ್ಯವಹಾರವನ್ನು ಸಾರ್ವಜನಿಕ ಹಣದ ದುರುಪಯೋಗ ಎಂದು ಟೀಕಾಕಾರರು ಆರೋಪಿಸಿದ್ದರು ಎಂದು ತನಿಖಾ ವರದಿಯು ಬೆಟ್ಟು ಮಾಡಿದೆ.

ಕಳೆದೊಂದು ವರ್ಷದಲ್ಲಿ ಅದಾನಿ ಗ್ರೂಪ್‌ನ ಸಾಲ ಶೇ.20ರಷ್ಟು ಏರಿಕೆಯಾಗಿದ್ದರೂ ಹಾಗೂ ಅಮೆರಿಕವು ಅದಾನಿ ಗ್ರೂಪ್ ವಿರುದ್ಧ ಭ್ರಷ್ಟಾಚಾರ ಮತ್ತು ವಂಚನೆ ಆರೋಪಗಳನ್ನು ಹೊರಿಸಿದ್ದರೂ ಪ್ರಸಾವನೆಯ ಘೋಷಿತ ಗುರಿಗಳಲ್ಲಿ ಅದಾನಿಯಲ್ಲಿ ‘ವಿಶ್ವಾಸವನ್ನು ಸೂಚಿಸುವುದು’ ಮತ್ತು ಇತರ ಹೂಡಿಕೆದಾರರನ್ನು ಆಕರ್ಷಿಸುವುದು ಸೇರಿತ್ತು. ಈ ಅಕ್ಟೋಬರ್‌ನಲ್ಲಿ ಅಮೆರಿಕದ ಸೆಕ್ಯೂರಿಟಿಸ್ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಅದಾನಿ ಗ್ರೂಪ್‌ನ ಅಧಿಕಾರಿಗಳಿಗೆ ಸಮನ್ಸ್ ಮತ್ತು ದೂರುಗಳನ್ನು ಜಾರಿಗೊಳಿಸುವಂತೆ ತನ್ನ ಮನವಿಗಳ ಕುರಿತು ಕ್ರಮ ಕೈಗೊಳ್ಳಲು ಭಾರತೀಯ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಹೇಳಿತ್ತು.
ತನಿಖಾ ವರದಿಯು ಅದಾನಿ ಗ್ರೂಪ್ ವಿರುದ್ಧ ಶೇರುಗಳ ಬೆಲೆಗಳನ್ನು ಕೃತಕವಾಗಿ ಏರಿಸಿದ ಮತ್ತು ಹಣಕಾಸು ಅಕ್ರಮಗಳ ಆರೋಪಗಳನ್ನು ಮಾಡಿದ್ದ ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್‌ನ 2023ರ ವರದಿಯನ್ನೂ ಗಮನಕ್ಕೆ ತೆಗೆದುಕೊಂಡಿದೆ. ಸೆಬಿ ನಡೆಸಿದ ತನಿಖೆಯು ಸೆಪ್ಟಂಬರ್‌ನಲ್ಲಿ ಅದಾನಿ ಗ್ರೂಪ್ ವಿರುದ್ಧದ ಎರಡು ಆರೋಪಗಳನ್ನು ತಳ್ಳಿ ಹಾಕಿದೆ. ಹಿಂಡೆನ್‌ಬರ್ಗ್ ಈಗ ಈಗ ಸ್ಥಗಿತಗೊಂಡಿದ್ದು, ಪರಿಣಾಮವು ಇತರ ರೀತಿಗಳಲ್ಲಿ ಸ್ಪಷ್ಟವಾಗಿದೆ. ಅದಾನಿ ಸಾಲಕ್ಕಾಗಿ ಸಂಪರ್ಕಿಸಿದ್ದ ಹಲವಾರು ಪ್ರಮುಖ ಅಮೆರಿಕನ್ ಮತ್ತು ಐರೋಪ್ಯ ಬ್ಯಾಂಕುಗಳು ಈ ಪರಿಸ್ಥಿತಿಯಲ್ಲಿ ಸಾಲ ನೀಡಲು ಹಿಂದೇಟು ಹೊಡೆದಿದ್ದವು ಎಂದು ಪೋಸ್ಟ್ ತನ್ನ ವರದಿಯಲ್ಲಿ ಹೇಳಿದೆ.
ಪೋಸ್ಟ್‌ಗೆ ಲಭ್ಯವಾಗಿರುವ ಡಿಎಫ್‌ಎಸ್ ದಾಖಲೆಗಳಲ್ಲಿ ಅದಾನಿಯನ್ನು ‘ದೂರದೃಷ್ಟಿಯುಳ್ಳ ಉದ್ಯಮಿ’ ಎಂದು ಬಣ್ಣಿಸಿರುವ ಭಾರತೀಯ ಅಧಿಕಾರಿಗಳು ಬಂದರುಗಳು, ಇಂಧನ ಮತ್ತು ಮೂಲಸೌಕರ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಅವರ ಉದ್ಯಮಗಳನ್ನು ರಾಷ್ಟ್ರೀಯ ಆರ್ಥಿಕ ಗುರಿ ಸಾಧನೆಗೆ ಪ್ರಮುಖ ಎಂದು ಪರಿಗಣಿಸಿದ್ದಾರೆ. ಪೋಸ್ಟ್ ಜೊತೆ ಮಾತನಾಡಿದ ವಿಶ್ಲೇಷಕರು,
ಹೆಚ್ಚಿನವರು ಕಡಿಮೆ ಆದಾಯದವರೇ ಆಗಿರುವ ಮಿಲಿಯಗಟ್ಟಲೆ ಭಾರತೀಯರಿಗೆ ವಿಮೆ ರಕ್ಷಣೆಯನ್ನು ಒದಗಿಸುವ ಎಲ್‌ಐಸಿಯು ಈಗಾಗಲೇ ಜಾಗತಿಕ ನಿಗಾದಡಿ ಇರುವ, ರಾಜಕೀಯ ಸಂಪರ್ಕಗಳನ್ನು ಹೊಂದಿರುವ ಖಾಸಗಿ ಸಮೂಹದಲ್ಲಿ ಭಾರೀ ಹೂಡಿಕೆಯಿಂದಾಗಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿಯು ಉಲ್ಲೇಖಿಸಿರುವ ಸ್ವತಂತ್ರ ವಿಶ್ಲೇಷಕ ಹೇಮಿಂದ್ರ ಹಝಾರಿ ಅವರು, ಎಲ್‌ಐಸಿ ಖಾಸಗಿ ಕಾರ್ಪೊರೇಟ್ ಸಂಸ್ಥೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿರುವುದು ‘ಅಸಹಜ’ವಾಗಿದೆ. ಎಲ್‌ಐಸಿಗೆ ಏನಾದರೂ ಸಂಭವಿಸಿದರೆ ಸರಕಾರವು ಮಾತ್ರ ಅದನ್ನು ಪಾರು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕರು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಿದಂತೆ ಅನೇಕರು ಮಾಡಿರುವ ಆರೋಪಗಳಿಗೆ ಅದಾನಿ ಜೊತೆ ಮೋದಿಯವರ ನಿಕಟ ಸಂಬಂಧ ಕೇಂದ್ರಬಿಂದುವಾಗಿದೆ. ಅದಾನಿ ಗ್ರೂಪ್ ಇಂತಹ ರೋಪಗಳನ್ನು ‘ಭಾರತದ ವಿರುದ್ಧ ಪಿತೂರಿ’ ಎಂದು ಬಣ್ಣಿಸಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ ವೀಕ್ಷಕರು ಈ ಪಾರುಗಾಣಿಕೆಯನ್ನು ಭಾರತದಲ್ಲಿ ಗಾಢಗೊಳ್ಳುತ್ತಿರುವ ಕಾರ್ಪೊರೇಟ್-ಸರಕಾರಿ ಸಂಬಂಧಕ್ಕೆ ಸಾಕ್ಷಿಯನ್ನಾಗಿ ನೋಡುತ್ತಿದ್ದಾರೆ. ಇಲ್ಲಿ ಅದಾನಿಯ ಸಂಪತ್ತು ಸರಕಾರದ ಆರ್ಥಿಕ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಮೋದಿಯವರ ಅತ್ಯಂತ ಬಲಿಷ್ಠ ಮಿತ್ರರಲ್ಲೋರ್ವರನ್ನು ಸುಸ್ಥಿರವಾಗಿಸುವುದರ ಹಣಕಾಸು ಅಪಾಯವನ್ನು ಅಂತಿಮವಾಗಿ ತೆರಿಗೆದಾರರೇ ಎದುರಿಸುತ್ತಾರೆ.