ನಟಿ ತನುಶ್ರೀ ದತ್ತಾಗೆ ಮನೆಯಲ್ಲೇ ಕಿರುಕುಳ: ವಿಡಿಯೋ ಹಂಚಿಕೊಂಡು ಸಹಾಯಕ್ಕೆ ಮೊರೆ!

ಬಾಲಿವುಡ್ ನಟಿ ತನುಶ್ರೀ ದತ್ತಾ ಶಾಕಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ. ನನ್ನ ಮನೆಯಲ್ಲೇ ನನಗೆ ಕಿರುಕುಳ ಕೊಡುತ್ತಿದ್ದಾರೆ. ಯಾರಾದರೂ ಕಾಪಾಡಿ ಎಂದು ವೀಡಿಯೋ ಮಾಡಿ ಅತ್ತಿದ್ದಾರೆ. ಕೆಲ ವರ್ಷಗಳಿಂದ ನನಗೆ ಹೀಗೆ ಹಿಂಸೆ ಕೊಡುತ್ತಿದ್ದಾರೆ. ಮೆನೆ ಕೆಲಸದವರನ್ನು ಸೇರಿಸಿಕೊಂಡರೆ ಅವ್ರು ನನ್ನ ವಸ್ತುಗಳನ್ನು ಕದಿಯುತ್ತಾರೆ ಎಂದು ತನುಶ್ರೀ ಹೇಳಿದ್ದಾರೆ.

ನಾನು ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018 ರಿಂದ ನಡೆಯುತ್ತಿದೆ. ಕೊನೆಗೆ ಬೇಸತ್ತು ಪೊಲೀಸರಿಗೆ ಫೋನ್ ಮಾಡಿದ್ದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ. ತಡವಾಗುವ ಮುನ್ನ ಏನಾದರೂ ಮಾಡಿ” ಎಂದು ಕ್ಯಾಪ್ಷನ್ ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ತನುಶ್ರೀ ದತ್ತಾ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಸೆಲ್ಫಿ ವೀಡಿಯೋ ಮಾಡಿ ಮಾತನಾಡಿರುವ ತನುಶ್ರೀ ದತ್ತಾ “ನನ್ನ ಮನೆಯಲ್ಲೇ ನನಗೆ ಕಿರುಕುಳ ಕೊಡುತ್ತಿದ್ದಾರೆ. ಪೊಲೀಸರಿಗೆ ಫೋನ್ ಮಾಡಿದ್ರೆ, ಠಾಣೆಗೆ ಬಂದು ದೂರು ನೀಡಲು ಹೇಳುತ್ತಿದ್ದಾರೆ. ನಾಳೆ ಅಥವಾ ನಾಡಿದ್ದು ಪೊಲೀಸರ ಬಳಿ ತೆರಳಿ ದೂರು ನೀಡುತ್ತೇನೆ. ಕಳೆದ ನಾಲ್ಕೈದು ವರ್ಷಗಳಿಂದ ಈ ನೋವು ಭರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮನೆ ಅಸ್ತವ್ಯಸ್ತವಾಗಿದೆ. ಮನೆ ಕೆಲಸದವರನ್ನು ಸೇರಿಸಿಕೊಂಡರೆ ಅವ್ರು ನನ್ನ ವಸ್ತುಗಳನ್ನು ಕದಿಯುತ್ತಿದ್ದಾರೆ. ನನ್ನ ಮನೆಯಲ್ಲೇ ನನಗೆ ಭದ್ರತೆ ಇಲ್ಲ. ಯಾರಾದರೂ ಬಂದು ನನಗೆ ಸಹಾಯ ಮಾಡಿ” ಎಂದು ಅತ್ತು ವೀಡಿಯೋ ಮಾಡಿದ್ದಾರೆ.
ಒಂದ್ಕಾಲದಲ್ಲಿ ಬಿಂದಾಸ್ ನಟಿಯಾಗಿ ಗುರ್ತಿಸಿಕೊಂಡಿದ್ದ ತನುಶ್ರೀ ದತ್ತಾ ಬಳಿಕ ಚಿತ್ರರಂಗದ ದೂರಾಗಿದ್ದರು. ಏಳೆಂಟು ವರ್ಷಗಳ ಹಿಂದೆ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಮೀಟು ಆರೋಪ ಮಾಡಿ ಸುದ್ದಿ ಆಗಿದ್ದರು. 4 ವರ್ಷಗಳ ಹಿಂದೆ ಕೂಡ ಇದೇ ರೀತಿ ತಮಗೆ ಪ್ರಾಣಭಯ ಇದೆ ಎಂದು ತನುಶ್ರೀ ಹೇಳಿಕೊಂಡಿದ್ದರು. ನನಗೇನಾದರೂ ಆದರೆ ಅವರನ್ನು ಸುಮ್ಮನೆ ಬಿಡಬೇಡಿ ಎಂದಿದ್ದರು.
ಮನೆಯಲ್ಲೇ ಕಿರುಕುಳ ನೀಡುತ್ತಿದ್ದಾರೆ ಎಂದು ತನುಶ್ರೀ ದತ್ತಾ ಹೇಳಿದ್ರು, ಯಾರು ಕಿರುಕುಳ ಕೊಡುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಜಾರ್ಖಂಡ್ ಮೂಲದ ತನುಶ್ರೀ ಮಾಡೆಲ್ ಆಗಿ ಬಳಿಕ ಸಿನಿಮಾ ನಟಿಯಾಗಿ ಗುರ್ತಿಸಿಕೊಂಡಿದ್ದರು. ‘ಆಶಿಕ್ ಬನಾಯ ಅಪ್ನೆ’ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.
ಒಂದು ತೆಲುಗು ಹಾಗೂ ಒಂದು ತಮಿಳು ಚಿತ್ರದಲ್ಲಿ ಕೂಡ ತನುಶ್ರೀ ದತ್ತಾ ಬಣ್ಣ ಹಚ್ಚಿದ್ದರು. ‘ಹಾರ್ನ್ ಓಕೆ ಪ್ಲೀಸ್’ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ 7 ವರ್ಷಗಳ ಹಿಂದೆ ತನುಶ್ರೀ ಗಂಭೀರ ಆರೋಪ ಮಾಡಿದ್ದರು. ಡ್ಯಾನ್ಸ್ ಮಾಡುವಾಗ ನನಗೆ ಮುಜುಗರವಾಗುವಂತೆ ಸ್ಟೆಪ್ಸ್ ಹಾಕೋಕೆ ಒತ್ತಾಯಿಸಿದ್ದರು ಎಂದು ಆಕೆ ಆರೋಪಿಸಿದ್ದರು.
ತನುಶ್ರೀ ದತ್ತಾ ಹೀಗೆ ತಮಗಾದ ಕಹಿ ಅನುಭವದ ಬಗ್ಗೆ ಮೀಟು ಅಭಿಯಾನದ ಅಡಿಯಲ್ಲಿ ಮಾತನಾಡಿದ ಬಳಿಕ ಸಾಕಷ್ಟು ನಟಿಯರು ತಮ್ಮ ನೋವನ್ನು ತೋಡಿಕೊಂಡಿದ್ದರು. ತನುಶ್ರೀ ತಮ್ಮ ಆರೋಪ ಸಂಬಂಧ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ನಾನಾ ಪಾಟೇಕರ್, ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್ ಸಿದ್ದಿಕಿ, ನಿರ್ದೇಶಕ ರಾಕೇಶ್ ಸೇರಿ 10 ಜನರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ತನುಶ್ರೀ ಆರೋಪವನ್ನು ನಾನಾ ಪಾಟೇಕರ್ ನಿರಾಕರಿಸಿದ್ದರು.
ತನುಶ್ರೀ ಪ್ರಕಾರ ಲೈಂಗಿಕ ಕಿರುಕುಳ ಅಂದ್ರೆ ಏನು? ಎಂದು ನಾನಾ ಪಾಟೇಕರ್ ಪ್ರಶ್ನಿಸಿದ್ದರು. 200 ಜನ ಅಂದು ಶೂಟಿಂಗ್ ಸೆಟ್‌ನಲ್ಲಿ ಇದ್ವಿ. ಕಾನೂನಿನ ಪ್ರಕಾರ ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಯಾರು ಏನು ಬೇಕಾದರೂ ಮಾಡಲಿ, ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದರು.
