ಮಾದಕ ವಸ್ತು ಜಾಲದಲ್ಲಿ ಸಿಕ್ಕಿಬಿದ್ದ ನಟಿ ಅಂಜು ಕೃಷ್ಣ ಸೇರಿ 8 ಮಂದಿ ಅರೆಸ್ಟ್!

ಚಿತ್ರರಂಗ (Movie Industry) ಹಾಗೂ ಡ್ರಗ್ಸ್ಗೂ ಆಪ್ತ ನಂಟು. ಆಗೊಮ್ಮೆ ಈಗೊಮ್ಮೆ ಚಿತ್ರರಂಗಕ್ಕೆ ಸೇರಿದ ಮಂದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನ, ವಿಚಾರಣೆ ಎದುರಿಸುತ್ತಲೇ ಇರುತ್ತಾರೆ. ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್, ಮಾಲಿವುಡ್ ಯಾವುದೂ ಸಹ ಡ್ರಗ್ಸ್ ಪ್ರಕರಣಕ್ಕೆ ಹೊರತಲ್ಲ. ಇದೀಗ ತಮಿಳು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಕೇಳಿ ಬಂದಿದ್ದು, ಒಬ್ಬ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಡ್ರಗ್ಸ್ ಸಮೇತ ಪೊಲೀಸರು ಬಂಧಿಸಿದ್ದಾರೆ.

ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ ಅವರುಗಳನ್ನು ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗದ ತಂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾನಿ ಚೆಲ್ಲಪ್ಪ ಹೆಸರಿನ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನಡೆದ ಆಪರೇಷನ್ನಲ್ಲಿ ನಟಿ ಸೇರಿದಂತೆ ಇತರರ ಬಂಧನವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರವಕ್ಕಂ ಎಂಬಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ಮಾಡಿದಾಗ ಆತ ವೆಂಕಟೇಶ್ ಹೆಸರಿನ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಅಂಶ ತಿಳಿದು ಬಂತು. ಬಳಿಕ ವೆಂಕಟೇಶ್ ಎಂಬಾತನನ್ನು ಪೊಲೀಸರೇ ಗ್ರಾಹಕನ ರೀತಿ ಸಂಪರ್ಕ ಮಾಡಿ, ಡ್ರಗ್ಸ್ ಮಾರುವಂತೆ ಹೇಳಿ, ನಿಗದಿತ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆ ವ್ಯಕ್ತಿ ಬಂದಾಗ ಆತನನ್ನು ಬಂಧಿಸಿ, ಆತನಿಂದ ಆರು ಗ್ರಾಂ ಮೆಥಾಫೆಟಮೈನ್, ಏಳು ಗ್ರಾಂ ಓಜಿ ಗಾಂಜಾ, ಹದಿನೈದು ಗ್ರಾಂ ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಒಂಬತ್ತು ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆತನ ಮಾಹಿತಿಯ ಮೇರೆಗೆ ಪೊಲೀಸರು ಇತರೆ ಕೆಲವರನ್ನು ಬಂಧಿಸಿದ್ದು, ಈ ವೇಳೆ, ನಟಿ ಅಂಜು ಕೃಷ್ಣ ಮತ್ತು ಸಹಾಯಕಿ ನಿರ್ದೇಶಕಿ ವಿನ್ಸಿ ನಿವೇತಾ ಅನ್ನು ಸಹ ಬಂಧಿಸಲಾಗಿದೆ. ಅಂಜು ಕೃಷ್ಣ ತಮಿಳಿನ ‘ವೆಲ್ಲಿಮಲೈ’ ಮಲಯಾಳಂನ ‘ಆರೊ’, ‘ಆಕಾಶಂ ಕದನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.