8 ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ ನಟಿ ಅಮೂಲ್ಯ

ಕನ್ನಡ ಚಿತ್ರರಂಗದ ‘ಗೋಲ್ಡನ್ ಕ್ವೀನ್’ ಎಂದೇ ಫೇಮಸ್ ಆಗಿರುವ ನಟಿ ಅಮೂಲ್ಯ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟ ಮೇಲೆ ನಟನೆಯಿಂದ ದೂರವೇ ಉಳಿದಿದ್ದರು. ಮುದ್ದಾದ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದ ಮೇಲಂತೂ ಮಕ್ಕಳ ಲಾಲನೆ ಪಾಲನೆಯಲ್ಲೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ ಇದೀಗ ಪುನಃ ಅವರು ಚಿತ್ರರಂಗಕ್ಕೆ ಮರಳುವುದಕ್ಕೆ ಅಣಿಯಾಗಿದ್ದಾರೆ. ಅವರ ಹೊಸ ಸಿನಿಮಾದ ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ ಅಮೂಲ್ಯ.

ಒಂದು ಉತ್ತಮ ಸ್ಕ್ರಿಪ್ಟ್ ಬೇಕೆಂದು ಕಾದಿದ್ದ ಅಮೂಲ್ಯ, ಇದೀಗ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಹಿಂದೆ ಅಮೂಲ್ಯಗೆ ‘ಶ್ರಾವಣಿ ಸುಬ್ರಮಣ್ಯ’ ರೀತಿಯ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದ ಮಂಜು ಸ್ವರಾಜ್ ಅವರೇ ಈ ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಮೂಲ್ಯ ಅವರ ಹುಟ್ಟುಹಬ್ಬದಂದೇ ಈ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸಣ್ಣದಾದ ಟೀಸರ್ ಮೂಲಕ ಅಮೂಲ್ಯ ಅವರ ರೀ ಎಂಟ್ರಿಗೆ ಚಿತ್ರತಂಡ ಸ್ವಾಗತ ಕೋರಿದೆ. ಟೀಸರ್ ನೋಡುತ್ತಿದ್ರೆ, ಅಮೂಲ್ಯ ಕೂಡ ತಮ್ಮ ಕಮ್‌ಬ್ಯಾಕ್‌ಗಾಗಿ ಭರ್ಜರಿ ತಯಾರಿ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ.
ಈ ಟೀಸರ್ ಡ್ಯಾನ್ಸ್‌ನಲ್ಲಿ ಅಮೂಲ್ಯಗೆ ವಿ ನಾಗೇಂದ್ರ ಅವರು ಕೊರಿಯೋಗ್ರಾಫ್ ಮಾಡಿದ್ದು, ಸಖತ್ ಫನ್ನಿ ಎನಿಸುವ ಮ್ಯೂಸಿಕ್‌ಗೆ ಸಿಂಗಲ್ ಟೇಕ್‌ನಲ್ಲಿ ಅಮೂಲ್ಯ ಸ್ಟೆಪ್ಸ್ ಹಾಕಿದ್ದಾರೆ. ಅಂದಹಾಗೆ, ಅಮೂಲ್ಯ ಕೊನೆಯದಾಗಿ 2017ರಲ್ಲಿ ‘ಮಾಸ್ತಿಗುಡಿ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಅದೇ ವರ್ಷ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ಪೋಷಿಸಿದ್ದರು. ಆನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದರು.
ಏನಿದು ‘ಪೀಕಬೂ’?
ಅಮೂಲ್ಯ ಅವರ ಈ ಹೊಸ ಸಿನಿಮಾಗೆ ‘ಪೀಕಬೂ’ ಎಂದು ಹೆಸರಿಡಲಾಗಿದೆ? ಅಷ್ಟಕ್ಕೂ ಈ ‘ಪೀಕಬೂ’ ಎಂದರೆ ಏನು? ಮಕ್ಕಳನ್ನ ನಗಿಸುವುದಕ್ಕೆ ಬಳಸುವ ಪದ ಇದಂತೆ. ಒಂದೊಳ್ಳೆ ಸಂದೇಶದ ಜೊತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಈ ಸಿನಿಮಾದಲ್ಲಿ ಇರಲಿದೆಯಂತೆ. ಸದ್ಯ ಈ ಸಿನಿಮಾಗೆ ಹೀರೋಯಿನ್ ಎಂಟ್ರಿಗಾಗಿ ಟೀಸರ್ ರಿಲೀಸ್ ಮಾಡಿರೋ ಟೀಮ್, ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದೆ. ಇನ್ನು ಸಿನಿಮಾದಲ್ಲಿ ಹೀರೋ ಯಾರು ಎಂಬದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಸುರೇಶ್ ಬಾಬು ಛಾಯಾಗ್ರಹಣ ಮಾಡುತ್ತಿದ್ದು, ವೀರ್ ಸಮರ್ಥ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ಕೆಂಚಾಂಬಾ ಫಿಲಂಸ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ಅವರು ‘ಪೀಕಾಬೂ’ ಸಿನಿಮಾವನ್ನ ನಿರ್ಮಿಸುತ್ತಿದ್ದಾರೆ.
