ನಟ ವಿಜಯ್ ಸೇತುಪತಿ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ: ವಿವಾದ ಭುಗಿಲೆದ್ದ ಬೆನ್ನಲ್ಲೇ ಪೋಸ್ಟ್ ಡಿಲೀಟ್!

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಸೇತುಪತಿ ವಿರುದ್ಧ ಮಹಿಳೆಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ರಮ್ಯಾ ಮೋಹನ್ ಹೆಸರಿನ ಎಕ್ಸ್ ಖಾತೆಯ ಮೂಲಕ ಕಾಸ್ಟಿಂಗ್ ಕೌಚ್ ಆರೋಪ ಹೊರಿಸಿದ್ದು, ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ರಂಗದ ವಿಷಕಾರಿ ಸಂಸ್ಕೃತಿಯಲ್ಲಿ ವಿಜಯ್ ಸೇತುಪತಿ ಕೂಡ ಭಾಗಿಯಾಗಿದ್ದಾರೆ ಎಂದಿರುವ ಮಹಿಳೆ, ಮಾದಕ ದ್ರವ್ಯಗಳು, ಕಾಸ್ಟಿಂಗ್ ಕೌಚ್ ಪದ್ಧತಿ ಮತ್ತು ದುರ್ಬಲ ವ್ಯಕ್ತಿಗಳ ಶೋಷಣೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ವಿಜಯ್ ಸೇತುಪತಿ ಅವರು ನನಗೆ ಗೊತ್ತಿರುವ ಯುವತಿಯ ಮೇಲೆ ವರ್ಷಗಳಿಂದ ದೌರ್ಜನ್ಯ ನಡೆಸಿದ್ದಾರೆ. ಆ ಮಹಿಳೆ ಪ್ರಸ್ತುತ ಪುನರ್ವಸತಿ ಕೇಂದ್ರದಲ್ಲಿದ್ದಾರೆ ಎಂದು ರಮ್ಯಾ ಮೋಹನ್ ಆರೋಪಿಸಿದ್ದು, ಭಾರಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಆ ಪೋಸ್ಟ್ ಅನ್ನು ಎಕ್ಸ್ ಖಾತೆಯಲ್ಲಿ ಡಿಲೀಟ್ ಮಾಡಲಾಗಿದೆ.
ಕಾಲಿವುಡ್‌ನಲ್ಲಿ ಡ್ರಗ್ ಮತ್ತು ಕಾಸ್ಟಿಂಗ್ ಕೌಚ್ ಸಂಸ್ಕೃತಿ ತಮಾಷೆಯಲ್ಲ. ನನಗೆ ತಿಳಿದಿರುವ ಒಬ್ಬ ಹುಡುಗಿಯನ್ನು ಆಕೆಗೆ ಎಂದಿಗೂ ಪರಿಚಯವಿಲ್ಲದ ಜಗತ್ತಿಗೆ ಬಲವಂತವಾಗಿ ಎಳೆಯಲಾಯಿತು. ಆಕೆ ಈಗ ಪುನರ್ವಸತಿಯಲ್ಲಿದ್ದಾಳೆ. ಸಿನಿಮಾ ವಲಯದಲ್ಲಿ ಡ್ರಗ್ಸ್, ವಂಚನೆ ಮತ್ತು ಶೋಷಣೆ ಸಾಮಾನ್ಯವಾಗಿದೆ. ವಿಜಯ್ ಸೇತುಪತಿ ಕ್ಯಾರವಾನ್ ಫೇವರ್ಸ್‌ಗಾಗಿ 2 ಲಕ್ಷ ರೂ. ಆಮಿಷ ಒಡ್ಡಿದರು. ಅಲ್ಲದೆ, ಆಕೆಯನ್ನು ವರ್ಷಗಳ ಕಾಲ ಬಳಸಿಕೊಂಡರು. ಇದು ಕೇವಲ ಕಥೆಯಲ್ಲ. ಇಷ್ಟೆಲ್ಲ ಆದರೂ ಮಾಧ್ಯಮಗಳು ಅಂತಹ ಪುರುಷರನ್ನು ಸಂತರಂತೆ ಪೂಜಿಸುತ್ತವೆ. ಸಿನಿಮಾ ವಲಯದಲ್ಲಿ ಡ್ರಗ್-ಸೆಕ್ಸ್ ಸಂಬಂಧ ಇರುವುದು ನಿಜ. ಇದು ತಮಾಷೆಯಲ್ಲ ಎಂದು ಮಹಿಳೆ ಬರೆದಿದ್ದಾರೆ.
ಯಾವಾಗ ರಮ್ಯಾ ಮೋಹನ್ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತೋ ಅನೇಕ ಜನರು ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. ಘಟನೆ ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ರಮ್ಯಾ ಅವರು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ರಮ್ಯಾ ಮತ್ತೊಂದು ಪೋಸ್ಟ್ ಮಾಡಿದ್ದು, ತಮ್ಮ ಪೋಸ್ಟ್ ಇಷ್ಟೊಂದು ಗಮನ ಸೆಳೆಯುತ್ತದೆ ಎಂದು ತಿಳಿದಿರಲಿಲ್ಲ ಮತ್ತು ಹುಡುಗಿಯ ಉತ್ತಮ ಜೀವನ ಮತ್ತು ಗೌಪ್ಯತೆಯನ್ನು ಗೌರವಿಸಿ ಪೋಸ್ಟ್ ಡಿಲೀಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇನ್ನು ವಿಜಯ್ ಸೇತುಪತಿ ಅವರು ಈ ಆರೋಪಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
