ನಟ ಸೂರ್ಯ ಅವರ ಅಗರಂ ಫೌಂಡೇಶನ್‌ಗೆ 15 ವರ್ಷಗಳ ಯಶಸ್ವಿ ಪಯಣ: 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಸೇವಾ ಕಾರ್ಯ

ನಟ ಸೂರ್ಯ ಅವರು ( Tamil Actor Suriya ) ರೀಲ್ ಅಲ್ಲಿ ಮಾತ್ರವಲ್ಲದೆ, ರಿಯಲ್ ಲೈಫ್‌ನಲ್ಲಿ ಕೂಡ ಹೀರೋ ಆಗಿದ್ದಾರೆ. ತೆರೆ ಮೇಲೆ ಫೈಟ್ ಮಾಡಿಯೋ, ಯಾರಿಗೋ ಸಹಾಯ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಹೀರೋ, ನಿಜಕ್ಕೂ ಹೀರೋ ಆಗೋದು ಯಾವಾಗ ಎಂದು ಸೂರ್ಯ ಅವರು ತೋರಿಸಿಕೊಟ್ಟಿದ್ದಾರೆ.

ಸೌಲಭ್ಯ ರಹಿತ ಮಕ್ಕಳು, ಯುವಕರಿಗೆ ಶಿಕ್ಷಣ ಮತ್ತು ಸಬಲೀಕರಣವನ್ನು ಒದಗಿಸುವ ಸಲುವಾಗಿ ನಟ ಸೂರ್ಯ ಅವರು ಅಗರಂ ಫೌಂಡೇಶನ್ ಆರಂಭಿಸಿ ಹದಿನೈದು ವರ್ಷಗಳು ಕಳೆದಿವೆ. ಹೀಗಾಗಿ ಚೆನ್ನೈನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳರ ನಟ ಸೂರ್ಯ, ಜ್ಯೋತಿಕಾ, ಕಾರ್ತಿ ಸೇರಿದಂತೆ ಇಡೀ ಕುಟುಂಬ ಹಾಗೂ ನಟ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದಾರೆ. ಫೌಂಡೇಶನ್‌ನ ಬೆಂಬಲದಿಂದ ಲಾಭ ಪಡೆದವರನ್ನು ಗೌರವಿಸಲಾಯಿತು. ಪ್ರಮುಖ ಪದವಿಗಳನ್ನು ಪೂರ್ಣಗೊಳಿಸಿದ, ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದವರನ್ನು ಗೌರವಿಸಲಾಯಿತು.
ನಟ ಸೂರ್ಯ ಹೇಳಿದ್ದೇನು?
ಈ ಬಗ್ಗೆ ಮಾತನಾಡಿದ ಸೂರ್ಯ ಅವರು, “ಒಳ್ಳೆಯ ಕಾರ್ಯಗಳನ್ನು ಮಾಡಲು ಆಸೆ ಪಡು ಎಂದು ಹೇಳಿ, ನಾವು ನಟನೆಗೆ ಬಂದಾಗ ಜನರು ತೋರಿದ ಪ್ರೀತಿಗೆ ಪ್ರತಿಫಲವಾಗಿ ಏನಾದರೂ ಮಾಡಬೇಕೆಂಬ ಆಸೆಯಿಂದ ಹುಟ್ಟಿತು. ಸಮಾಜಕ್ಕೆ ನಾವು ವಿಭಿನ್ನವಾದ ರೀತಿಯಲ್ಲಿ ಕೊಡುಗೆ ನೀಡಲು ಏನು ಮಾಡಬಹುದು ಎಂದು ಯೋಚಿಸಿದೆವು. ಆಗ ನಾವು ಗಿರಿಜನ ಶಾಲೆಯನ್ನು ದತ್ತು ತೆಗೆದುಕೊಂಡೆವು. ಆಗ 6ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಶಿಕ್ಷಣವನ್ನು ಬಿಡುವುದು, ಕಠಿಣ ಕುಟುಂಬ ಪರಿಸ್ಥಿತಿಗಳು ಮತ್ತು ಅವರು ಎದುರಿಸುವ ಅನೇಕ ಸಮಸ್ಯೆಗಳು ಗಮನಕ್ಕೆ ಬಂದಿತು. ಇದನ್ನು ಸರಿಪಡಿಸಲು, ಶಿಕ್ಷಣದಲ್ಲಿ ನಂಬಿಕೆಯನ್ನು ಮೂಡಿಸಲು, ನಾವು ‘ಹೀರೋ-ವಾ? ಝೀರೋ-ವಾ?’ ಎಂಬ ಕಿರುಚಿತ್ರವನ್ನು ನಿರ್ಮಿಸಿದೆವು. ವಿಜಯ್, ಮಾಧವನ್, ಜೋ, ನಾನು ಅದರಲ್ಲಿ ನಟಿಸಿದೆವು. ಸರ್ಕಾರವು ನಂತರ ಈ ಸಿನಿಮಾವನ್ನು ರಾಜ್ಯದಾದ್ಯಂತ ಶಾಲೆಗಳಿಗೆ ತಲುಪಿಸಿತು. ಹಣದಿಂದ ಮಗುವಿನ ಶಿಕ್ಷಣದಿಂದ ನಿಲ್ಲಬಾರದು” ಎಂದು ಹೇಳಿದ್ದಾರೆ.
ಸಿಂಗಂ ಸಿನಿಮಾ ಶೂಟಿಂಗ್ ವೇಳೆ ಮಕ್ಕಳ ಶಿಕ್ಷಣಕ್ಕಾಗಿ ಕೈಜೋಡಿಸಿ ಎಂದು ಕೇಳಿಕೊಂಡೆವು. ಅದರಿಂದ 1 ಕೋಟಿ ರೂಪಾಯಿಗಳನ್ನು ಒಟ್ಟುಗೂಡಿಸಿತು. ಇದು ಹಲವಾರು ಯುವಕರ ಶಿಕ್ಷಣಕ್ಕೆ ಸಹಾಯಕವಾಯ್ತು. ಆರಂಭದಲ್ಲಿ ನಾವು 100 ವಿದ್ಯಾರ್ಥಿಗಳಿಗೆ ಬೆಂಬಲ ನೀಡ್ತೀವಿ ಎಂದು ಹೇಳಿದ್ದೆವು. ಆದರೆ 160 ಜನರಿಗೆ ಸಹಾಯ ಮಾಡಬೇಕಾಯಿತು. ಅಂದು 160 ವಿದ್ಯಾರ್ಥಿಗಳಿಂದ ಆರಂಭವಾದದ್ದು, ಹದಿನೈದು ವರ್ಷಗಳಲ್ಲಿ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆವು” ಎಂದು ಸೂರ್ಯ ಹೇಳಿದದಾರೆ.
ಅಣ್ಣನ ಮಕ್ಕಳನ್ನು ಹೊಗಳಿದ ಕಾರ್ತಿ!
ನಟ ಕಾರ್ತಿ ಅವರು, “ನನ್ನ ಅಣ್ಣನ ಮಕ್ಕಳಾದ ದಿಯಾ ಮತ್ತು ದೇವ್ ಕೂಡ ತಮ್ಮ ಪಾಕೆಟ್‌ಮನಿಯನ್ನು ಈ ಫೌಂಡೇಶನ್‌ಗೆ ಕೊಡುತ್ತಿದ್ದಾರೆ. ಇದು ನನಗೆ ನಿಜವಾಗಿಯೂ ತುಂಬಾ ಖುಷಿಕೊಟ್ಟಿದೆ. ಜ್ಯೋತಿಕಾ ಅತ್ತಿಗೆ ನಿಜಕ್ಕೂ ಒಂದು ದೊಡ್ಡ ಬೆಂಬಲವಾಗಿದ್ದಾರೆ. ಸೂರ್ಯ ಅಣ್ಣ ಯಾವಾಗಲೂ ಈ ಮಕ್ಕಳು ಓದಿ ಜೀವನದಲ್ಲಿ ಬೆಳೆಯಬೇಕು ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ.
ಜ್ಯೋತಿಕಾ ಅವರು ಕೊರೊನಾ ಟೈಮ್‌ನಲ್ಲಿ ಆಸ್ಪತ್ರೆಗಳಿಗೆ ಸ್ವಯಂಸೇವಕರಾಗಿ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ಗಮನಸೆಳೆದರು, ಆದರೂ ಅವರ ಗಮನವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನಸಹಾಯ ನೀಡುವುದರ ಮೇಲಿತ್ತಂತೆ. ಅಂದಹಾಗೆ ಈ ಫೌಂಡೇಶನ್ ಹಣದಿಂದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಂಜಿನಿಯರ್ ಆಗಿದ್ದಾರೆ, ಅಷ್ಟೇ ಅಲ್ಲದೆ ಆರ್ಥಿಕ ಸಬಲತೆ ಸಾಧಿಸಿದ್ದಾರೆ. ನಿರ್ಮಾಪಕ ಟಿಜೆ ಜ್ಞಾನವೇಲ್ ಅವರು ಈ ಫೌಂಡೇಶನ್‌ಗೆ 50 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದಾರೆ.
