ಸಿನಿಮಾ ಫ್ಲಾಪ್ ಆದ ಹಿನ್ನೆಲೆಯಲ್ಲಿ ಸಂಭಾವನೆ ವಾಪಸ್ ಮಾಡಿದ ನಟ

ಸಿನಿಮಾಗಳ (Cinema) ಬಜೆಟ್‌ಗಳು ಮಿತಿ ಮೀರುತ್ತಿದೆ. ಸಿನಿಮಾದ ಒಟ್ಟು ಬಜೆಟ್‌ಗಿಂತಲೂ ಹೆಚ್ಚು ಹಣವನ್ನು ನಟರು ಸಂಭಾವನೆಯಾಗಿ ಪಡೆಯುತ್ತಿರುವುದೂ ಇದೆ. ಸಿನಿಮಾ ನಟ-ನಟಿಯರ ಸಂಭಾವನೆ ಹೆಚ್ಚಳದ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ದಕ್ಷಿಣದ ಹಲವು ನಿರ್ಮಾಪಕರು ಈಗಾಗಲೇ ಮಾತನಾಡಿದ್ದಾರೆ.
ಹೊಸ ನಟರುಗಳು ಸಹ ಈಗ ಹತ್ತಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸಿನಿಮಾ ಹಿಟ್ ಆಗಲಿ ಫ್ಲಾಪ್ ಆಗಲಿ ಅದಕ್ಕೂ ಅವರಿಗೂ ಸಂಬಂಧವಿಲ್ಲ. ಆದರೆ ಇಲ್ಲೊಬ್ಬ ನಾಯಕ ನಟ ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಪಡೆದಿದ್ದ ಸಂಭಾವನೆಯನ್ನು ವಾಪಸ್ ಮಾಡಿದ್ದಾರೆ.
ಸಿದ್ದು ಜೊನ್ನಲಗಡ್ಡ ತೆಲುಗಿನ ಜನಪ್ರಿಯ ಮತ್ತು ಪ್ರತಿಭಾವಂತ ಯುವನಟ. ಇವರ ನಟನೆಯ ‘ಟಿಲ್ಲು’ ಸಿನಿಮಾ ಸಖತ್ ಹಿಟ್ ಆಗಿತ್ತು. ಇತ್ತೀಚೆಗೆ ‘ಟಿಲ್ಲು 2’ ಸಹ ಬಂದಿತ್ತು. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ಆ ಬಳಿಕ ಸಿದ್ದು ನಟಿಸಿದ ಸಿನಿಮಾ ಒಂದು ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ನಿರ್ಮಾಪಕರಿಗೆ ಇದರಿಂದ ಭಾರಿ ನಷ್ಟ ಉಂಟಾಯ್ತು. ಇದೇ ಕಾರಣಕ್ಕೆ ಸಿನಿಮಾಕ್ಕೆ ತಾವು ಪಡೆದಿದ್ದ ಸಂಭಾವನೆಯನ್ನು ಮರಳಿಸಿದ್ದಾರೆ ಸಿದ್ದು.
ಸಿದ್ದು ಜೊನ್ನಲಗಡ್ಡ ‘ಜಾಕ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಸಿನಿಮಾ ಏಪ್ರಿಲ್ 10 ರಂದು ಬಿಡುಗಡೆ ಆಗಿತ್ತು. ಸಿನಿಮಾನಲ್ಲಿ ಸಿದ್ದು ರಾ ಏಜೆಂಟ್ ಆಗುವ ಕನಸು ಕಾಣುತ್ತಿರುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದಾರೆ. ಸಿನಿಮಾಕ್ಕೆ ಸುಮಾರು 30 ಕೋಟಿ ಬಜೆಟ್ ಹಾಕಲಾಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು 10 ಕೋಟಿಯಷ್ಟೆ.
ಸಿನಿಮಾಕ್ಕಾಗಿ ಸಿದ್ದು ಪಡೆದಿದ್ದ ಸಂಭಾವನೆಯಲ್ಲಿ ನಾಲ್ಕು ಕೋಟಿ ಹಣವನ್ನು ಮರಳಿಸಿದ್ದಾರಂತೆ. ನಿರ್ಮಾಪಕರಗೆ ಆಗಿರುವ ಭಾರಿ ನಷ್ಟವನ್ನು ತುಂಬಿಕೊಡುವ ದೃಷ್ಟಿಯಿಂದಾಗಿ ಹೀಗೆ ಮಾಡಿದ್ದಾರೆ. ಸಿದ್ದು ಅವರ ಈ ನಡೆ ಸಿನಿಮಾ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಸಿದ್ದು ಜೊನ್ನಗಡ್ಡ ಹಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದು ನಾಯಕ ನಟ ಆದವರು. ಸಿದ್ದು ಪ್ರಸ್ತುತ, ‘ತೆಲುಸು ಕದಾ’ ಹಾಗೂ ‘ಟಿಲ್ಲು ಕ್ಯೂಬ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ತೆಲುಗು ಕದಾ’ ಸಿನಿಮಾನಲ್ಲಿ ಶ್ರೀನಿಧಿ ಶೆಟ್ಟಿ, ಸಿದ್ದು ಜೊತೆಗೆ ನಟಿಸುತ್ತಿದ್ದಾರೆ.