Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೈವಗಳಿಗೆ ಅಪಮಾನ ಆರೋಪ: ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ರಣವೀರ್ ಸಿಂಗ್

Spread the love

ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಮಾನಕರ ರೀತಿಯಲ್ಲಿ ಅನುಕರಣೆ ಮಾಡಿದ ಹಾಗೂ ಚಾವುಂಡಿ ದೈವದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆ‌ರ್ ರದ್ದು ಕೋರಿ ರಣವೀರ್ ಸಿಂಗ್ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದು, ಹೈಗೌಂಡ್ಸ್‌ ಠಾಣೆ ಪೊಲೀಸರು ಹಾಗೂ ಖಾಸಗಿ ದೂರುದಾರ ಪ್ರಶಾಂತ್ ಮೆಥಲ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಿದ್ದಾರೆ.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ಹಾಜರಾದ ರಣವೀ‌ರ್ ಸಿಂಗ್ ಪರ ವಕೀಲರು, ಅರ್ಜಿದಾರರು ಬಾಲಿವುಡ್ ನಟರಾಗಿದ್ದಾರೆ. ರಣವೀರ್ ಸಿಂಗ್‌ ಕಾಂತರ ಚಾಪ್ಟರ್ -1 ರ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟನೆ ಬಗ್ಗೆ ಪ್ರಾಮಾಣಿಕವಾಗಿ ಹೊಗಳಿ ಮಾತನಾಡಿದ್ದಾರೆ. ಆದರೆ, ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ. ಪ್ರಕರಣದಲ್ಲಿನ ಖಾಸಗಿ ದೂರುದಾರರು ವಕೀಲರಾಗಿದ್ದಾರೆ. ಅರ್ಜಿಯನ್ನು ಇಂದು ಮಧ್ಯಾಹ್ನ 2.30ಕ್ಕೆ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಏಕೆ ತುರ್ತು ವಿಚಾರಣೆ ನಡೆಸಬೇಕು? ಅರ್ಜಿದಾರರು ಬಾಲಿವುಡ್ ನಟರೆಂಬ ಕಾರಣಕ್ಕಾಗಿಯೇ? ಹಾಲಿವುಡ್‌ನವರಾದರೆ ಈಗಲೇ ವಿಚಾರಣೆ ನಡೆಸಬೇಕೇ? ಎಂದು ಪ್ರಶ್ನಿಸಿದರು.

ರಣವೀರ್ ಪರ ವಕೀಲರು, ಪೊಲೀಸರು ಅರ್ಜಿದಾರರಿಗೆ ಈಗಾಗಲೇ ಎರಡು ಬಾರಿ ನೋಟಿಸ್‌ ಜಾರಿ ಮಾಡಿದ್ದಾರೆ. ಆದ್ದರಿಂದ, ತುರ್ತು ವಿಚಾರಣೆಗೆ ಕೋರಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಪ್ರಕರಣದ ಹಿನ್ನೆಲೆ:
ನಗರದ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದ ಪ್ರಶಾಂತ್‌ ಮೆಥಲ್, 2025ರ ನವೆಂಬರ್ 28ರಂದು ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರ ಚಾಪ್ಟರ್-1 ಕುರಿತು ಮಾತನಾಡಿದ್ದರು. ಈ ವೇಳೆ ಚಿತ್ರದ ಕರವಾಳಿ ಕರ್ನಾಟಕ ಭಾಗದ ಪಂಜುರ್ಲಿ/ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಿಸಿದ್ದಾರೆ ಎಂದು ಆರೋಪಿಸಿದ್ದರು.

ಮುಂದುವರಿದು, ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಇದರಿಂದ, ಚಾವುಂಡಿ ದೈವ ಭಕ್ತರ ಮನಸ್ಸಿಗೆ ನೋವಾಗಿದೆ. ಆ ಮೂಲಕ ರಣವೀರ್, ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ, ಈ ಕುರಿತು ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್ 196, 299 ಮತ್ತು 302 ಅಡಿಯಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸಿದ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದಲ್ಲಿ ಎಫ್‌ಐಆ‌ರ್ ದಾಖಲಿಸಿದ್ದ ಹೈಗೌಂಡ್ಸ್‌ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ರಣವೀ‌ರ್ ಸಿಂಗ್‌ಗೆ ನೋಟಿಸ್‌ ನೀಡಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ರಣವೀರ್ ಹೈಕೋರ್ಟ್ ಮೊರೆ ಹೋಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *