ಫ್ಲಾಟ್ಗಾಗಿ ಅಕ್ಕನ ಜೊತೆ ಕಿರಿಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್

ನಟ ರಂಜಿತ್ ಅವರು ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಅವರು ಹಲ್ಲೆ ಮಾಡಿದ ಆರೋಪ ಹೊತ್ತು ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂತು. ಇತ್ತೀಚೆಗೆ ಅದ್ದೂರಿಯಾಗಿ ರಂಜಿತ್ ವಿವಾಹ ನೆರವೇರಿತು. ಹೀಗಿರುವಾಗಲೇ ರಂಜಿತ್ ಪೊಲೀಸ್ ಠಾಣೆ ಮೆಟ್ಟಿಲೇರೋ ಪರಿಸ್ಥಿತಿ ಬಂದಿದೆ. ಅಷ್ಟಕ್ಕೂ ಆದ ಕಿರಿಕ್ ಏನು? ಆ ಬಗ್ಗೆ ಇಲ್ಲಿದೆ ವಿವರ.

2018ರಿಂದ ಅಮೃತಹಳ್ಳಿಯ ಫ್ಲ್ಯಾಟ್ನಲ್ಲಿ ರಂಜಿತ್ ಸಹೋದರಿ ರಶ್ಮಿ ಹಾಗೂ ಅವರ ಪತಿ ಜಗದೀಶ್ ವಾಸವಿದ್ದಾರೆ. 2025ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್ ವಾಸವಿದ್ದರಂತೆ. ಇದೀಗ ಮನೆ ವಿಚಾರಕ್ಕೆ ಅಕ್ಕ ತಮ್ಮನ ನಡುವೆ ಗಲಾಟೆ ಆಗಿದೆ. ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದೆ.
ಈ ಮನೆ ರಶ್ಮಿ ಹೆಸರಲ್ಲೇ ಇದೆ ಎನ್ನಲಾಗಿದೆ. ಆದರೆ, ಮನೆ ಖರೀದಿಸಲು ನಾನೂ ಹಣ ಹಾಕಿದ್ದೆ ಎಂದು ರಂಜಿತ್ ಹೇಳಿದ್ದಾರೆ. ಇದೇ ವಿಚಾರಕ್ಕೆ ರಂಜಿತ್ ಪತ್ನಿ ಹಾಗೂ ರಶ್ಮಿ ನಡುವೆ ಜಗಳ ನಡೆದಿದೆ. ಸದ್ಯ, ‘ಮನೆ ಬಿಟ್ಟು ಹೋಗು, ನಂದೆ ಮನೆ ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ಜಗದೀಶ್ ದೂರು ದಾಖಲು ಮಾಡಿದ್ದಾರೆ. ‘ನನ್ನ ಹೆಸರಲ್ಲಿ ಫ್ಲಾಟ್ ಇದೆ, ನೀವು ಮನೆ ಖಾಲಿ ಮಾಡಬೇಕು’ ಎಂದು ರಂಜಿತ್, ರಶ್ಮಿಗೆ ಹೇಳಿದ್ದಾರಂತೆ.
ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಗಂಭೀರವಲ್ಲದ ಪ್ರಕರಣ (Non-Cognizable Report) ದಾಖಲು ಮಾಡಿದ್ದಾರೆ. ಫ್ಲಾಟ್ ವಿಚಾರ ಸಿವಿಲ್ ವ್ಯಾಜ್ಯ ಆಗಿದೆ. ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ಬುದ್ಧಿ ಹೇಳಿ ಪೊಲೀಸರು ಕಳುಹಿಸಿದ್ದಾರೆ.
ರಂಜಿತ್ ಅವರು ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದರು. ಅವರು ಸಿಸಿಎಲ್ನಲ್ಲೂ ಕ್ರಿಕೆಟ್ ಆಡಿದ್ದರು. ಈ ವೇಳೆ ಸುದೀಪ್ ಜೊತೆ ಆಪ್ತತೆ ಬೆಳೆದಿತ್ತು. ಆ ಬಳಿಕ ಅವರು ಬಿಗ್ ಬಾಸ್ಗೆ ಬಂದರು. ಆದರೆ, ಲಾಯರ್ ಜಗದೀಶ್ ಜೊತೆಗಿನ ಕಿರಿಕ್ನಿಂದ ಕೆಲವೇ ದಿನಗಳಲ್ಲಿ ಅವರು ಹೊರ ಹೋಗಬೇಕಾದ ಪರಿಸ್ಥಿತಿ ಬಂದಿತ್ತು.
