‘ರಿಚರ್ಡ್ ಆಂಟನಿ’ ಸಿನಿಮಾ ವಿಳಂಬದ ಬಗ್ಗೆ ಮೌನ ಮುರಿದ ನಟ ರಕ್ಷಿತ್ ಶೆಟ್ಟಿ

ರಿಚರ್ಡ್ ಆಂಟನಿ.. ರಿಚರ್ಡ್ ಆಂಟನಿ.. ರಿಚರ್ಡ್ ಆಂಟನಿ.. ರಕ್ಷಿತ್ ಶೆಟ್ಟಿ ಅಭಿಮಾನಿಗಳು ಜಪಿಸುತ್ತಿರುವ ಪದ ಇದು. ‘ಸಪ್ತಸಾಗರದಾಚೆ ಎಲ್ಲೊ’ ಸಿನಿಮಾ ಬಳಿಕ ರಕ್ಷಿತ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ.

4 ವರ್ಷಗಳ ಹಿಂದೆ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಯಾವುದೇ ಅಪ್‌ಡೇಟ್ ಸಿಗಲಿಲ್ಲ.
ಸ್ಟಾರ್ ನಟರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎನ್ನುವ ಬೇಡಿಕೆ ಚಿತ್ರರಂಗದಲ್ಲಿದೆ. ಆದರೆ ‘ಸಪ್ತಸಾಗರದಾಚೆ ಎಲ್ಲೊ’ ಸಿನಿಮಾ ಬಂದೋಗಿ 2 ವರ್ಷ ಕಳೆದರೂ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಬಂದಿಲ್ಲ. ತೆರೆಗೆ ಬರೋದು ಇರಲಿ ಚಿತ್ರೀಕರಣ ಕೂಡ ಶುರುವಾಗಿಲ್ಲ. ಹೇಳಿ ಕೇಳಿ ಇದು ದೊಡ್ಡ ಸಿನಿಮಾ. ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಅಂತೆಲ್ಲ ಹೆಚ್ಚು ಸಮಯ ಬೇಡುತ್ತದೆ. ಈಗ ಶುರುವಾದರೂ ಮುಂದಿನ ವರ್ಷ ಬಿಡುಗಡೆ ಆಗುವುದು ಕೂಡ ಅನುಮಾನ ಎನ್ನುವಂತಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ರಿಚರ್ಡ್ ಆಂಟನಿ’ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಹೋಗಲಿ ಆ ಸಿನಿಮಾ ಬಿಟ್ಟು ಬೇರೆ ಮಾಡಿ. ಇನ್ನು ಸಿನಿಜೀವನದ ಪ್ರೈಂ ಟೈಂನಲ್ಲಿ ಹೀಗೆ ಸಿನಿಮಾ ಮಾಡದೇ ಇರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಏನೇ ಪೋಸ್ಟ್ ಮಾಡಿದ್ರೂ ‘ರಿಚರ್ಡ್ ಆಂಟನಿ’ ಅಪ್‌ಡೇಟ್ ಕೊಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ.
ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿ ‘ರಿಚರ್ಡ್ ಆಂಟನಿ’ ಸಿನಿಮಾ ನಿಂತೇ ಹೋಯ್ತು ಎಂದು ಕೆಲವರು ಭಾವಿಸಿದ್ದಾರೆ. ಅಂತಿಮವಾಗಿ ಈ ಬಗ್ಗೆ ರಕ್ಷಿತ್ ಶೆಟ್ಟಿ ಈ ಬಗ್ಗೆ ಮೌನ ಮುರಿದಿದ್ದಾರೆ. ಯೂಎಸ್‌ನಲ್ಲಿ ನಡೆದ ‘ನಾವಿಕ ವಿಶ್ವ ಕನ್ನಡ ಸಮ್ಮೇಳನ’ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಏರಿ ಅವರು ಮಾತನಾಡಿದ್ದಾರೆ. “ಕೆಲವೊಮ್ಮೆ ದೊಡ್ಡ ಕೆಲಸ ಮಾಡುವಾಗ ಸಮಯ ತೆಗೆದುಕೊಳ್ಳುತ್ತೆ” ಎಂದಿದ್ದಾರೆ.
ರಕ್ಷಿತ್ ಶೆಟ್ಟಿ ಮಾತನಾಡಿ “ಕನ್ನಡ ಭಾಷೆಗೆ 3000 ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇದೆ. ಅದನ್ನು ನಾವು ಉಳಿಸಬೇಕಿಲ್ಲ. ಅದೇ ನಮ್ಮನ್ನು ಉಳಿಸುತ್ತದೆ. ಎಲ್ಲೇ ಹೋದ್ರು ಕನ್ನಡ ಭಾಷೆಯನ್ನು ಪ್ರೀತಿ ಮಾಡಣ, ಬೆಳೆಸಲು ಏನು ಮಾಡಬೇಕೋ ಅದನ್ನು ಮಾಡಣ. ನಾನು ಚಿತ್ರರಂಗದವನು. ಹಾಗಾಗಿ ನಾನು ನನ್ನ ತಂಡ ಕನ್ನಡ ಭಾಷೆ ಉಳಿಸಲು ಏನು ಮಾಡಬೇಕೋ ಆ ಪ್ರಯತ್ನದಲ್ಲಿದ್ದೀವಿ” ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ದೊಡ್ಡ ಕೆಲಸ ಮಾಡುವಾಗ, ಒಳ್ಳೆ ಕೆಲಸ ಮಾಡುವಾಗ ಟೈಂ ತಗೊಳ್ಳುತ್ತೆ. ಅದಕ್ಕೆ ನಾನು ಸ್ವಲ್ಪ ಜಾಸ್ತಿ ಟೈಂ ತಗೋತ್ತಿದ್ದೀನಿ. ಚಿತ್ರಮಂದಿರಕ್ಕೆ ಬರದವರು ಚಿತ್ರಮಂದಿರಕ್ಕೆ ಮತ್ತೆ ಬರುವಂತೆ ಸಿನಿಮಾ ಮಾಡ್ತೀನಿ” ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ. ‘ರಿಚರ್ಡ್ ಆಂಟನಿ’ ಸಿನಿಮಾ ತೆರೆಗೆ ಬರಲು ಇನ್ನು ಹೆಚ್ಚು ಸಮಯ ಬೇಕು ಎಂದು ರಕ್ಷಿತ್ ಹೇಳಿರುವುದು ಕೆಲವರಿಗೆ ಬೇಸರ ತಂದಿದೆ. ಇನ್ನು ಎಷ್ಟು ಸಮಯ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ‘ರಿಚರ್ಡ್ ಆಂಟನಿ’ ಸಿನಿಮಾ ನಿರ್ಮಾಣ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ‘ಉಳಿದವರು ಕಂಡಂತೆ’ ಚಿತ್ರದ ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಕಥೆ ಚಿತ್ರದಲ್ಲಿ ಇರುತ್ತದೆ ಎನ್ನಲಾಗ್ತಿದೆ. ಅಂದರೆ ರಿಚ್ಚಿಯ ಹಿನ್ನೆಲೆಯ ಜೊತೆ ಜೊತೆಗೆ ಮುಂದಿನ ಕಥೆ ಹೇಳಲಿದ್ದಾರೆ.
‘ರಿಚರ್ಡ್ ಆಂಟನಿ’ ಬಳಿಕ ‘ಪುಣ್ಯಕೋಟಿ’ ಭಾಗ-1 ಹಾಗೂ ಭಾಗ-2, ‘ಮಿಡ್‌ನೈಟ್ ಟು ಮೋಕ್ಷ’ ಹೀಗೆ ಒಂದಷ್ಟು ಸಿನಿಮಾಗಳನ್ನು ನಿರ್ದೇಶಿಸಿ ನಟಿಸಲು ರಕ್ಷಿತ್ ಪ್ಲ್ಯಾನ್ ಮಾಡಿದ್ದಾರೆ. ಈ ಹಿಂದೆ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮಾಡಲು ರಕ್ಷಿತ್ ಬಹಳ ಸಮಯ ತೆಗೆದುಕೊಂಡಿದ್ದರು. ಅಂತಿಮವಾಗಿ ಸಿನಿಮಾ ನಿರಾಸೆ ಮೂಡಿಸಿತ್ತು.