ನಟ ರಕ್ಷಕ್ ಬುಲೆಟ್ ಥಾರ್ ಕಾರು ಅಪಘಾತ: ಯುವಕನ ಕಾಲು ಮುರಿತ

ಬೆಂಗಳೂರು : ನಟ ರಕ್ಷಕ್ ಬುಲೆಟ್ (Rakshak Bullet,) ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಬೇಕಾಬಿಟ್ಟಿ ಥಾರ್ ಕಾರು ಚಲಾಯಿಸಿ ಬೈಕ್‌ಗೆ (car accident ) ಢಿಕ್ಕಿ ಹೊಡೆದಿದ್ದಾರೆ. ರಕ್ಷಕ್ ಬುಲೆಟ್ ಎಡವಟ್ಟಿನಿಂದ ಯುವಕನ ಕಾಲು ಮುರಿತವಾಗಿದೆ.

ಅಜಾಗರೂಕತೆಯಿಂದ ಜೀಪ್ ಚಲಾಯಿಸಿದ್ದರಿಂದ ಬೈಕ್‌ಗೆ ಕಾರು ಢಿಕ್ಕಿಯಾಗಿದೆ. ಗುರುವಾರ ಬೆಳಗ್ಗೆ 11.30 ಸುಮಾರಿಗೆ ಅಪಘಾತ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವೇಣುಗೋಪಾಲ ಎಂಬ ಯುವಕನ ಬೈಕ್ ಗೆ ರಕ್ಷಕ್ ಅವರ ಕೆಂಪು ಬಣ್ಣದ ಥಾರ್ ಕಾರು ಢಿಕ್ಕಿಯಾಗಿದೆ. ಈ ವೇಳೆ ಬೈಕ್‌ನಲ್ಲಿ ವೇಣುಗೋಪಾಲ್ ಹಾಗೂ ಆತನ ಸ್ನೇಹಿತೆ ಇದ್ದರು ಎನ್ನುವುದು ಗೊತ್ತಾಗಿದೆ. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಆಕ್ಸಿಡೆಂಟ್ ನಡೆದಿದೆ. ಆಕ್ಸಿಡೆಂಟ್ ಆದ ನಂತರ ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ವೇಣುಗೋಪಾಲ್ ಅವರನ್ನು ದಾಖಲಿಸಲಾಗಿದೆ. ಆಕ್ಸಿಡೆಂಟ್ ಅದ ಪರಿಣಾಮ ವೇಣುಗೋಪಾಲ್ ಎಡಗಾಲಿನ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದ್ದು, ಸದ್ಯ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಪ್ರಥಮ್ ಮೇಲೆ ಹಲ್ಲೆ ಕೇಸ್‌ನಲ್ಲಿ ರಕ್ಷಕ್ ಬುಲೆಟ್ ಹೆಸರು ಕೇಳಿ ಬಂದಿತ್ತು. ಸ್ವತಃ ರಕ್ಷಕ್ ಬುಲೆಟ್ ಪ್ರಥಮ್‌ನನ್ನು ದೊಡ್ಡಬಳ್ಳಾಪುರಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿತ್ತು. ಕೊನೆಗೆ ಸ್ವತಃ ಪ್ರಥಮ್,ದೊಡ್ಡಬಳ್ಳಾಪುರದಲ್ಲಿ ನನ್ನ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆ ಮಾಡಿರುವುದಕ್ಕೂ ರಕ್ಷಕ್ ಬುಲೆಟ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
