ಬಲೂಚಿಸ್ತಾನದಲ್ಲಿ ಬಸ್ ಪ್ರಯಾಣಿಕರ ಅಪಹರಣ ಹಾಗೂ ಹತ್ಯೆ: ಪಂಜಾಬ್‌ನ ಜನರಿಗೆ ಗುಂಡಿಕ್ಕಿ ಭೀಕರ ದಾಳಿ

ಬಲೂಚಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶಸ್ತ್ರ ಸಜ್ಜಿತ ವ್ಯಕ್ತಿಗಳು ಬಸ್ ಪ್ರಯಾಣಿಕರನ್ನು ಅಪಹರಿಸಿ, 9 ಮಂದಿಯ ಹತ್ಯೆ ಮಾಡಿರುವ ಭಯಾನಕ ಘಟನೆ ವರದಿಯಾಗಿದೆ. ದುಷ್ಕರ್ಮಿಗಳು ಬಸ್ಸಿನಲ್ಲಿದ್ದ ಪಂಜಾಬ್‌ನ 9 ಪ್ರಯಾಣಿಕರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಪ್ರಾಂತ್ಯದ ಝೋಬ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ವರದಿಯಾಗಿದೆ ಎಂದು ಸಹಾಯಕ ಆಯುಕ್ತ ಝೋಬ್ ನವೀದ್ ಆಲಂ ತಿಳಿಸಿದ್ದಾರೆ.

ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲಿಸಿ ಹತ್ಯೆ
ಶಸ್ತ್ರಸಜ್ಜಿತ ದಂಗೆಕೋರರು ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು ಮತ್ತು ಅವರಲ್ಲಿ ಒಂಬತ್ತು ಜನರನ್ನು ಕ್ವೆಟ್ಟಾದಿಂದ ಲಾಹೋರ್‌ಗೆ ಹೋಗುತ್ತಿದ್ದ ಬಸ್‌ನಿಂದ ಇಳಿಸಿ, ಗುಂಡಿಕ್ಕಿ ಕೊಂದಿದ್ದಾರೆ. ಒಂಬತ್ತು ಮಂದಿಯೂ ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆಗಾಗಿ ನಾವು ಒಂಬತ್ತು ಶವಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಅವರು ಹೇಳಿದರು.
ಬಲೂಚಿಸ್ತಾನದ ವಿವಿಧ ಹೆದ್ದಾರಿಗಳಲ್ಲಿ ಚಲಿಸುವ ಪಂಜಾಬ್ ಪ್ರಾಂತ್ಯದ ಜನರು ಮತ್ತು ಪ್ರಯಾಣಿಕ ಬಸ್‌ಗಳನ್ನು ಗುರಿಯಾಗಿಸಿಕೊಂಡು ದಂಗೆಕೋರರು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ.
ಯಾವುದೇ ಗುಂಪು ಹೊಣೆ ಹೊತ್ತಿಲ್ಲ
ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಹಿಂದೆ, ಬಲೂಚ್ ಭಯೋತ್ಪಾದಕ ಗುಂಪುಗಳು ಪಂಜಾಬ್ ಜನರ ವಿರುದ್ಧ ಇಂತಹ ದಾಳಿಗಳನ್ನು ನಡೆಸಿದೆ.ಕ್ವೆಟ್ಟಾ, ಲೊರಾಲೈ ಮತ್ತು ಮಸ್ತುಂಗ್‌ನಲ್ಲಿ ದಂಗೆಕೋರರು ಇತರ ಮೂರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾರೆ. ಆದರೆ ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್, ಭದ್ರತಾ ಪಡೆಗಳು ಈ ದಾಳಿಗಳನ್ನು ಹಿಮ್ಮೆಟ್ಟಿಸಿದವು ಎಂದು ಹೇಳಿದ್ದಾರೆ.
ದಂಗೆಕೋರರು ರಾತ್ರಿಯ ಸಮಯದಲ್ಲಿ ಪ್ರಾಂತ್ಯದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಮತ್ತು ಚೆಕ್ ಪೋಸ್ಟ್‌ಗಳು, ಸರ್ಕಾರಿ ಸ್ಥಾಪನೆಗಳು, ಪೊಲೀಸ್ ಠಾಣೆಗಳು, ಬ್ಯಾಂಕುಗಳು ಮತ್ತು ಟವ್ ಮೇಲೆ ದಾಳಿ ಮಾಡಿದ್ದಾರೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದ ಧಂಗೆಗಳು ನಡೆಯುತ್ತಿವೆ.
ಮಾರ್ಚ್‌ನಲ್ಲಿ, ಗ್ವಾದರ್ ಬಂದರಿನ ಬಳಿಯ ಕಲ್ಮತ್ ಪ್ರದೇಶದಲ್ಲಿ ಲಾಂಗ್ ಬಾಡಿ ಟ್ರೇಲರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಐದು ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಫೆಬ್ರವರಿಯಲ್ಲಿ, ದಂಗೆಕೋರರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದ ಏಳು ಪ್ರಯಾಣಿಕರನ್ನು ಇಳಿಸಿ ಬರ್ಖಾನ್ ಪ್ರದೇಶದಲ್ಲಿ ಸ್ಥಳದಲ್ಲೇ ಕೊಂದಿದ್ದರು.
