ಆಮಿರ್ ಖಾನ್‌ರ ‘ಸೀತಾರೆ ಜಮೀನ್ ಪರ್’ ಆಗಸ್ಟ್ 1 ರಿಂದ ಯೂಟ್ಯೂಬ್‌ನಲ್ಲಿ ಲಭ್ಯ: ₹100 ಪಾವತಿಸಿ ವೀಕ್ಷಿಸಿ!

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಮಂಗಳವಾರ ಇತ್ತೀಚಿಗೆ ಬಿಡುಗಡೆಯಾದ ತಮ್ಮ ‘ಸೀತಾರೆ ಜಮೀನ್ ಪರ್’ ಚಿತ್ರ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ ನಂತರ ಬೇಡಿಕೆಯ ಮೇರೆಗೆ ಯೂಟ್ಯೂಬ್ ಮೂವೀಸ್‌ನಲ್ಲಿ ಲಭ್ಯವಿರುತ್ತದೆ ಎಂದು ಘೋಷಿಸಿದ್ದಾರೆ.

ಆಗಸ್ಟ್ 1 ರಿಂದ ಈ ಚಿತ್ರವು ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದ್ದು, 100 ರೂಪಾಯಿ ಶುಲ್ಕ ಪಾವತಿಸಿದರೆ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ. ಯುಎಸ್, ಕೆನಡಾ, ಯುಕೆ, ಆಸ್ಟ್ರೇಲಿಯಾ, ಜರ್ಮನಿ, ಇಂಡೋನೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಸ್ಪೇನ್ ಸೇರಿದಂತೆ 38 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಪ್ರತಿ ಮಾರುಕಟ್ಟೆಗೆ ಸ್ಥಳೀಯ ಬೆಲೆಯೊಂದಿಗೆ ಪ್ರಸಾರವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರ್.ಎಸ್. ಪ್ರಸನ್ನ ನಿರ್ದೇಶನದ ‘ಸೀತಾರೆ ಜಮೀನ್ ಪರ್’ ಜೂನ್‌ನಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ರೂ. 250 ಕೋಟಿಗೂ ಹೆಚ್ಚು ಗಳಿಸಿದೆ.
“ಕಳೆದ 15 ವರ್ಷಗಳಿಂದ ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋಕೆ ಬೇಸರ ಎನ್ನುವವರು ಅಥವಾ ವಿವಿಧ ಕಾರಣಗಳಿಂದ ಚಿತ್ರಮಂದಿರಗಳಿಗೆ ಬರಲು ಸಾಧ್ಯವಾಗದ ಪ್ರೇಕ್ಷಕರನ್ನು ಹೇಗೆ ತಲುಪುವುದು ಎಂಬ ಸವಾಲಿನೊಂದಿಗೆ ನಾನು ಹೋರಾಡುತ್ತಿದ್ದೆ. ಕೊನೆಗೂ ಆ ಸಮಯ ಬಂದಿದೆ. ಯೂಟ್ಯೂಬ್ ಹೆಚ್ಚಿನ ಸಾಧನಗಳಲ್ಲಿ ಇರುವುದರಿಂದ, ನಾವು ಅಂತಿಮವಾಗಿ ಭಾರತದ ವಿಶಾಲ ವರ್ಗದ ಜನರನ್ನು ಮತ್ತು ಪ್ರಪಂಚದ ಗಮನಾರ್ಹ ಭಾಗವನ್ನು ತಲುಪಲು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡುವುದಾಗಿ ” ಅಮೀರ್ ಖಾನ್ ಹೇಳಿದ್ದಾರೆ.
ಸಿತಾರೆ ಜಮೀನ್ ಪರ್ 2025 ರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ನಟಿ ಜೆನೆಲಿಯಾ ದೇಶಮುಖ್ ನಟಿಸಿದ್ದಾರೆ. ಅಲ್ಲದೆ 10 ವಿಕಲಚೇತನರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
