ಒಂದು ವೈರಲ್ ವಿಡಿಯೋದಿಂದ ಪಿಸ್ತಾದ ಬೆಲೆಯಲ್ಲೇ ಬದಲಾವಣೆ

ದುಬೈ:ಸೋಶಿಯಲ್ ಮೀಡಿಯಾದಲ್ಲಿ ತಿಳಿ ಹಸಿರು ಬಣ್ಣದ ಫೀಡಿಂಗ್ ಹೊಂದಿರುವ ಚಾಕೊಲೇಟ್ ಬಾರ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ದುಬೈ ಚಾಕೊಲೇಟ್ ಎಂದೇ ಪ್ರಸಿದ್ಧಿ ಪಡೆದಿರುವ ಈ ಚಾಕೋಲೇಟ್ ಫೇಮಸ್ ಆಗ್ತಿದ್ದಂತೆ ಅದಕ್ಕೆ ಬಳಸುವ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಪಿಸ್ತಾ ಬೆಲೆ ಏರಿಕೆಗೂ ಇದು ಕಾರಣ ಎನ್ನಲಾಗಿದೆ. 2022 ರಲ್ಲಿ ಯುಎಇ ಮೂಲದ ಫಿಕ್ಸ್ ಡೆಸರ್ಟ್ಸ್ (Fix Desserts) ಚಾಕೊಲೇಟ್ ಇದನ್ನು ತಯಾರಿಸಿತ್ತು. ಟಿಕ್ ಟಾಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಇದ್ರ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ಜಗತ್ತಿನಾದ್ಯಂತ ಈ ಚಾಕೋಲೇಟ್ ಗೆ ಬೇಡಿಕೆ ಬಂದಿದೆ. ಈ ಚಾಕೋಲೇಟ್ ಗೆ ಪಿಸ್ತಾ ಬಳಕೆ ಮಾಡಲಾಗುತ್ತದೆ. ಚಾಕೋಲೇಟ್ ಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಪಿಸ್ತಾ ಬೆಲೆ ಕೂಡ ಗಗನಕ್ಕೇರಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ, ಒಂದು ಪೌಂಡ್ ಪಿಸ್ತಾ ಬೆಲೆ ಈಗ ಪ್ರತಿ ಪೌಂಡ್ಗೆ 879 ರೂಪಾಯಿಯಾಗಿದೆ. ಒಂದು ವರ್ಷದ ಹಿಂದೆ 653 ರೂಪಾಯಿ ಇತ್ತು. ಪಿಸ್ತಾ ಬೆಲೆ ಹೆಚ್ಚಳಕ್ಕೆ ಚಾಕೋಲೇಟ್ ಒಂದೇ ಕಾರಣವಲ್ಲದೆ ಹೋದ್ರೂ ಅದೂ ಒಂದು ಕಾರಣ ಎಂಬುದು ಗಮನಾರ್ಹ. ದುಬೈ ಚಾಕೊಲೇಟ್ ಎಂದರೇನು? : ದುಬೈನ FIX ನ ಸಂಸ್ಥಾಪಕಿ ಸಾರಾ ಹಮೌದಾ ಅವರು 2021 ರಲ್ಲಿ ಚಾಕೊಲೇಟ್ ಬಾರ್ ತಯಾರಿಸಿದ್ರು. ಆ ಫ್ಲೇವರ್ಗೆ Can’t Get Kanafeh of It ಎಂದು ಹೆಸರಿಟ್ಟರು. ಹೆಸರೇ ಸೂಚಿಸುವಂತೆ, ಇದು ಮಧ್ಯಪ್ರಾಚ್ಯ ಸಿಹಿತಿಂಡಿ ಕನಾಫೆ ಅಥವಾ ಕುನಾಫಾದಿಂದ ಪ್ರೇರಿತವಾಗಿದೆ. ಇದನ್ನು ವರ್ಮಿಸೆಲ್ಲಿ ಅಥವಾ ಕತ್ತರಿಸಿದ ಪೇಸ್ಟ್ರಿ ಹಾಳೆಗಳನ್ನು ಬಳಸಿ ತಯಾರಿಸಲಾಗುತ್ತದೆ . ಸಿಹಿ ಕ್ರೀಮ್ ಚೀಸ್ನಿಂದ ತುಂಬಿಸಲಾಗುತ್ತದೆ. ಸಕ್ಕರೆ ಪಾಕ ಮತ್ತು ಪಿಸ್ತಾಗಳಿಂದ ಅಲಂಕರಿಸಲಾಗುತ್ತದೆ.

ಹಮೌದ್ ಮತ್ತು ಅವರ ಪತಿ ಯೆಜೆನ್ ಅಲೋನ್ ಈಜಿಪ್ಟ್ನಲ್ಲಿ ಜನಿಸಿ ಯುಕೆಯಲ್ಲಿ ಬೆಳೆದರು. ಒಂದು ದಶಕದ ಹಿಂದೆ ಯುಎಇಗೆ ಬಂದು ನೆಲೆಸಿದ್ರು. ಹಮೌದ್ ಗರ್ಭಿಣಿಯಾಗಿದ್ದಾಗ ಒಂದು ನಿರ್ದಿಷ್ಟ ರುಚಿಯನ್ನು ತಿನ್ನುವ ಹಂಬಲದಿಂದ ಈ ರುಚಿ ಹುಟ್ಟಿಕೊಂಡ್ತು ಎಂದು ಹಮೌದ್ ಹೇಳಿದ್ದಾರೆ. ಹಲವಾರು ತಿಂಗಳುಗಳವರೆಗೆ, ಅವರ ಬ್ರ್ಯಾಂಡ್ನ ಮಾರಾಟ ಸೀಮಿತವಾಗಿತ್ತು. ಡಿಸೆಂಬರ್ 2023 ರ ಟಿಕ್ಟಾಕ್ ವೀಡಿಯೊ 120 ಮಿಲಿಯನ್ಗಿಂತಲೂ ಹೆಚ್ಚು ವೀವ್ಸ್ ಪಡೆಯುತ್ತಿದ್ದಂತೆ ಇದ್ರ ಪ್ರಸಿದ್ಧಿ ಹೆಚ್ಚಾಯ್ತು. ನಂತ್ರ 30,000 ಕ್ಕೂ ಹೆಚ್ಚು ಆರ್ಡರ್ಗಳು ಬಂದವು. 2024 ರಲ್ಲಿ ಗೂಗಲ್ ನಲ್ಲಿ ಹುಡುಕಿದ ಆಹಾರ ಪದಾರ್ಥಗಳಲ್ಲಿ ದುಬೈ ಚಾಕೊಲೇಟ್ ಮೊದಲ ಸ್ಥಾನದಲ್ಲಿದೆ. ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ಸೀಮಿತ ಬ್ಯಾಚ್ಗಳಲ್ಲಿ ಬಿಡುಗಡೆ ಮಾಡುತ್ತದೆ. 200 ಗ್ರಾಂ ಚಾಕೊಲೇಟ್ ಬಾರ್ 1,707 ರೂಪಾಯಿಗೆ ಮಾರಾಟವಾಗುತ್ತದೆ. ಪಿಸ್ತಾ ಬೆಲೆ ಎಷ್ಟು? : ಪಿಸ್ತಾಗಳನ್ನು ಐತಿಹಾಸಿಕವಾಗಿ ಇರಾನ್ ಮತ್ತು ಸುತ್ತಮುತ್ತ ಬೆಳೆಯಲಾಗುತ್ತೆ. ಈ ಬೆಳೆಗೆ ಬೆಚ್ಚಗಿನ, ಶುಷ್ಕ ವಾತಾವರಣದ ಅಗತ್ಯವಿದೆ. ಇಂದು, ಅಮೆರಿಕ ಸಂಯುಕ್ತ ಸಂಸ್ಥಾನ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ದೇಶದ ಶೇಕಡಾ 99 ರಷ್ಟು ಕೃಷಿಯು ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರೀಕೃತವಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾದ ಇರಾನ್, ಮಾರ್ಚ್ 2025 ರವರೆಗಿನ ಆರು ತಿಂಗಳಲ್ಲಿ ಯುಎಇಗೆ ಶೇಕಡಾ 40 ರಷ್ಟು ಹೆಚ್ಚು ಪಿಸ್ತಾಗಳನ್ನು ರಫ್ತು ಮಾಡಿದೆ. ಈ ವರ್ಷ ಅಮೆರಿಕದಲ್ಲಿ ಉತ್ಪಾದನೆ ಕಡಿಮೆ ಇರುವುದರಿಂದ ವೈರಲ್ ಚಾಕೊಲೇಟ್ ಜೊತೆಗೆ ಪಿಸ್ತಾಗಳ ಲಭ್ಯತೆಯೂ ಸೀಮಿತವಾಗಿದೆ. ಕ್ಯಾಲಿಫೋರ್ನಿಯಾದ ಪೂರೈಕೆ 2023-24ರಲ್ಲಿ 1,400 ಮಿಲಿಯನ್ ಪೌಂಡ್ಗಳಿಂದ 2024-25ರಲ್ಲಿ 1,200 ಮಿಲಿಯನ್ ಪೌಂಡ್ಗಳಿಗಿಂತ ಸ್ವಲ್ಪ ಕಡಿಮೆಗೆ ಇಳಿಯುವ ನಿರೀಕ್ಷೆಯಿದೆ ಎಂದು FT ವರದಿ ಮಾಡಿದೆ.