‘ಲಾಲ್ ಪರಿ’ ಎಂದ ಏಳು ವರ್ಷದ ಬಾಲಕ:ವೈರಲ್ ಆದ ಇನ್ಸ್ಟಾಗ್ರಾಂ ಪೋಸ್ಟ್

ಮಹಿಳೆಯೊಬ್ಬರನ್ನು ಏಳು ವರ್ಷದ ಬಾಲಕ ಚುಡಾಯಿಸಿರುವ ಘಟನೆ ವರದಿಯಾಗಿದೆ. ಮಹಿಳೆ ಇನ್ಸ್ಟಾಗ್ರಾಂ(Instagram)ನಲ್ಲಿ ಪೋಸ್ಟ್ ಮಾಡಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ. ಆಕೆ ಲಾಂಗ್ ಸ್ಕರ್ಟ್ ಹಾಗೂ ಕೆಂಪು ಟಾಪ್ ಧರಿಸಿ ನಡೆಯುತ್ತಿರುವಾಗ ಆ ಬಾಲಕ ‘ಓ ಲಾಲ್ ಪರಿ’ ಎಂದು ಕಮೆಂಟ್ ಮಾಡಿದ್ದಾನೆ.

ಆರಂಭದಲ್ಲಿ ತನಗೆ ಅಚ್ಚರಿಯಾಯಿತು ಏನು ತಿರುಗಿ ಹೇಳಬೇಕೆಂದೇ ಗೊತ್ತಾಗಲಿಲ್ಲ, ಸೊಸೈಟಿಯ ಭದ್ರತಾ ಸಿಬ್ಬಂದಿ ಕೂಡ ಅದನ್ನು ನೋಡಿ ನಗುತ್ತಿರುವುದು ಕಂಡೂ ಮತ್ತಷ್ಟು ಅಚ್ಚರಿಯಾಯಿತು.
ಆಕೆ ಮತ್ತಷ್ಟು ಮುಂದಕ್ಕೆ ಹೋದಾಗ ಯಾರು ನೀನು, ನನ್ನ ಜತೆ ಬರ್ತೀಯಾ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಈ ಮಾತು ಕೇಳಿ ಮಹಿಳೆಗೆ ಕೋಪ ನೆತ್ತಿಗೇರಿ ಆ ಬಾಲಕನಿಗೆ ಬೈದಿದ್ದಾರೆ, ಆ ಸಮಯದಲ್ಲಿ ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಆ ಹುಡುಗನಿಗೆ ಕ್ಷಮೆ ಯಾಚಿಸುವಂತೆ ಸೂಚಿಸಿದರು. ಆದರೆ ಆತ ಒಲ್ಲದ ಮನಸ್ಸಿನಿಂದಲೇ ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಓಡಿ ಹೋಗಿದ್ದಾನೆಂದು ಮಹಿಳೆ ತಿಳಿಸಿದ್ದಾರೆ.
ಬೀದಿಗಳಲ್ಲಿ ಪುಂಡ-ಪೋಕರಿಗಳು ಹೆಣ್ಣುಮಕ್ಕಳನ್ನು ಚುಡಾಯಿಸಲು ಬಳಸುವ ಅದೇ ಸಾಲನ್ನು ಆರು-ಏಳು ವರ್ಷದ ಮಕ್ಕಳು ಬಳಸುತ್ತಿದ್ದಾರೆ ಎಂದರೆ ಈ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಭದ್ರತಾ ಸಿಬ್ಬಂದಿ ಬಾಲಕನ ಮಾತು ಕೇಳಿ ನಕ್ಕರೂ ಕೂಡ ನನಗೆ ಅದು ತಮಾಷೆ ಅನ್ನಿಸಲಿಲ್ಲ.
ತಮಾಷೆ ಎಂದು ಸುಮ್ಮನಿದ್ದರೆ ನಂತರ ಅದು ಕಿರುಕುಳವಾಗಿ ಮುಂದುವರೆದೀತು ಎಂದು ಕಿರಣ್ ಗ್ರೆವಾಲ್ ಬರೆದಿದ್ದಾರೆ. ಭದ್ರತಾ ಸಿಬ್ಬಂದಿಯು ಆ ಬಾಲಕ ಉತ್ತಮ ಕುಟುಂಬದಿಂದ ಬಂದವನು, ಯಾವುದೇ ದುರುದ್ದೇಶವಿಲ್ಲ, ತಮಾಷೆಗಾಗಿ ಮಾಡಿದ್ದಾನೆಂದು ಹೇಳುವ ಮೂಲಕ ಪರಿಸ್ಥಿತಿ ಶಾಂತವಾಗಿಸಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.
ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಈ ಘಟನೆಯು ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಪೋಷಕರ ಬಗ್ಗೆ ಕಳವಳ ವ್ಯಕ್ತಪಡಿಸಿತು.ಹಾಗೆಯೇ ನೀವು ಆ ಬಾಲಕನನ್ನು ತಡೆದು ಪೋಷಕರನ್ನು ಕರೆಸಿ ನಡೆದಿದ್ದನ್ನು ವಿವರಿಸಬೇಕಿತ್ತು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
