ಮತ್ತೆ ಚಿಗುರಿದ ಅಮ್ಮನ ಕನಸು : ಮಗಳೊಂದಿಗೆ ನೀಟ್ ಪರೀಕ್ಷೆ ಬರೆದು ಜಯದ ಹಾದಿಯಲ್ಲಿ ಹೆಜ್ಜೆ

ತಮಿಳುನಾಡಿನ ತೆಂಕಶಿ ಜಿಲ್ಲೆಯ 49 ವರ್ಷದ ಅಮುತವಲ್ಲಿ ಮಣಿವಣ್ಣನ್ಅವರು ತಮ್ಮ ಮಗಳು ಸಂಯುಕ್ತಾ ಅವರೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ತನ್ನ ಡಾಕ್ಟರ್ ಆಗುವ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ.

ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುವಾಗ ಅಮುತವಲ್ಲಿ ತನ್ನ ಮಗಳ ದೃಢನಿಶ್ಚಯವನ್ನು ನೋಡಿ ಸ್ವತಃ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪಠ್ಯಕ್ರಮವು ತುಂಬಾ ಕಷ್ಟಕರ ಮತ್ತು ಶಾಲಾ ದಿನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಕೂಡ ತನ್ನ ಮಗಳಿಂದ ಸ್ಫೂರ್ತಿ ಪಡೆದು ತಯಾರಿ ಆರಂಭಿಸಿದರು. ತನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದಾಗ ಅವರ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು ಎಂದು ಮಣಿವಣ್ಣನ್ ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸಂಯುಕ್ತಾ ನೀಟ್‌ಗೆ ತಯಾರಿ ನಡೆಸಲು ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುವ ವೇಳೆ ತಾಯಿಯೂ ಬೆಂಬಲವಾಗಿ ಅವಳೊಂದಿಗೆ ಜೊತೆಯಾಗುತ್ತಿದ್ದರು. ಹೀಗೆ ಮಗಳಿಗೆ ಸಾಥ್ ನೀಡುತ್ತಾ ಇದೀಗ ಅಮ್ಮ ಮಗಳು ಇಬ್ಬರೂ ಒಟ್ಟಿಗೆ ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
