ಮಣ್ಣಾಯಿತು ವಿಷಕಾರಿ ಶತಕೋಟಿ ಜನರ ಜೀವಕ್ಕಿದೆ ಅಪಾಯ!

ನವದೆಹಲಿ : ಜಗತ್ತಿನ ಎಲ್ಲಾ ಜೀವರಾಶಿಗಳು ಒಂದಲ್ಲ ಒಂದು ಮಾಲಿನ್ಯದಡಿಯಲ್ಲಿ ಬದುಕುತ್ತಿದ್ದಾರೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯಗಳು ಪ್ರತಿ ಹೆಜ್ಜೆ ಹೆಜ್ಜೆಗೂ ಗುರುತಿಸಬಹುದು. ಆದರೆ ಇದೀಗ ಮತ್ತೊಂದು ಮಾಲಿನ್ಯ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಅದು ಮೆಟಲ್ ಮಾಲಿನ್ಯ ಅಥವಾ ಲೋಹದ ಮಾಲಿನ್ಯ. ಇದರಿಂದ ವಿಶ್ವದಾದ್ಯಂತ ಬರೋಬ್ಬರಿ 1.4 ಶತಕೋಟಿ ಜನರು ಅಪಾಯದಲ್ಲಿದ್ದಾರೆ. ನಿಕಲ್, ಸೀಸ, ತಾಮ್ರ, ಕ್ಯಾಡ್ಮಿಯಮ್, ಕೋಬಾಲ್ಟ್,ಕ್ರೋಮಿಯಂ ಸೇರಿದಂತೆ ಹಲವು ಲೋಹಗಳನ್ನು ವಿಪರೀತವಾಗಿ ಬಳಕೆ ಮಾಡುತ್ತಿರುವ ಕಾರಣ ಮಣ್ಣು ವಿಷಕಾರಿಯಾಗಿದೆ. ಇದು ಆಹಾರವನ್ನು, ಬೆಳೆಗಳನ್ನು ವಿಷಕಾರಿ ಮಾಡುತ್ತಿದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ.
242 ಹಕ್ಟೇರ್ ಪ್ರದೇಶ ವಿಷಕಾರಿ
ಡೈಯಿ ಹ್ಯೂ ಹಾಗೂ ಸಿಬ್ಬಂದಿಗಳು ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ವಿಶ್ವದ 1,493 ವಿವಿಧ ಪ್ರಾಂತ್ಯಗಳಿಂದ ಬರೋಬ್ಬರಿ 8 ಲಕ್ಷ ಮಣ್ಣಿನ ಮಾದರಿ ಸಂಗ್ರಹಿಸಿ ಸಂಶೋಧನೆ ನಡೆಸಲಾಗಿದೆ. ಈ ವರದಿ ಪ್ರಕಾರ ವಿಶ್ವದಲ್ಲಿರುವ ಶೇಕಜಾ 14 ರಿಂದ 17 ರಷ್ಟು ಬೆಳೆ ಬೆಳೆಯುವ ಪ್ರದೇಶದ ಮಣ್ಣು ವಿಷಕಾರಿಯಾಗಿದೆ. ಅಂದರೆ 242 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಅತೀಯಾದ ಲೋಹ, ರಾಸಾಯನಿಕ ಸೇರಿದಂತೆ ಇತರ ವಿಷಕಾರಿ ವಸ್ತುಗಳ ಬಳಕೆಯಾಗುತ್ತಿರುವ ಕಾರಣ ಮಣ್ಣು ವಿಷಕಾರಿಯಾಗಿದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.
242 ಮಿಲಿಯನ್ ಹೆಕ್ಟೇರ್ಗಳ ಮಣ್ಣು ವಿಷಕಾರಿಯಾಗಿದೆ. ಇದು ಕೃಷಿ ಮತ್ತು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವಷ್ಟು ಹೆಚ್ಚಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಣ್ಣಿನ ವಿಷಕಾರಿತ್ವವು ಆಹಾರ ಭದ್ರತೆ, ಪರಿಸರ ಮತ್ತು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಇದರಿಂದ ಬೆಳೆ ಇಳುವರಿ ಕಡಿಮೆಯಾಗುತ್ತದೆ. ವಿಷಕಾರಿ ಲೋಹಗಳು ಆಹಾರದ ಮೂಲಕ ಮನುಷ್ಯ ಹಾಗೂ ಪ್ರಾಣಿಗಳ ದೇಹ ತಲುಪಬಹುದು. ಅಧ್ಯಯನದ ಒಂದು ಪ್ರಮುಖ ಸಂಶೋಧನೆಯೆಂದರೆ, ದಕ್ಷಿಣ ಯುರೇಷಿಯಾದಲ್ಲಿ ಲೋಹ-ಸಮೃದ್ಧ ವಲಯ ಪತ್ತೆಯಾಗಿದೆ.
ವರದಿಯಲ್ಲಿ ಬೆಚ್ಚಿಬೀಳಿಸುವ ಹಕ್ಕು
ಈ ಮಣ್ಣಿನ ವಿಷವು ಈಗ ಆಹಾರ, ಸಸ್ಯಗಳು ಮತ್ತು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ. ಇದರಿಂದಾಗಿ ಬೆಳೆ ಇಳುವರಿ ಕಡಿಮೆಯಾಗುತ್ತಿದೆ ಮತ್ತು ವಿಷಕಾರಿ ಲೋಹಗಳು ನಮ್ಮ ಆಹಾರ ಮತ್ತು ಪಾನೀಯಗಳನ್ನು ಪ್ರವೇಶಿಸುತ್ತಿವೆ. ವರದಿಯಲ್ಲಿ ಒಂದು ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ, ಯುರೇಷಿಯಾದ ಕೆಲವು ಬಿಸಿ ಪ್ರದೇಶಗಳಲ್ಲಿ ಹೊಸ ಲೋಹ-ಸಮೃದ್ಧ ವಲಯ ಪತ್ತೆಯಾಗಿದೆ, ಇದರ ಬಗ್ಗೆ ಈ ಹಿಂದೆ ಯಾರಿಗೂ ತಿಳಿದಿರಲಿಲ್ಲ.
ಮಣ್ಣು ವಿಷಕಾರಿಯಾಗಲು ಕಾರಣಗಳೇನು?
ಈ ಪ್ರದೇಶದ ಮಣ್ಣಿನಲ್ಲಿ ಈಗಾಗಲೇ ಹೆಚ್ಚಿನ ಲೋಹಗಳಿದ್ದವು ಮತ್ತು ಅಲ್ಲಿ ಜ್ವಾಲಾಮುಖಿಗಳು ಸಹ ಸ್ಫೋಟಗೊಂಡಿವೆ. ಇದಲ್ಲದೆ, ಅತಿಯಾದ ಗಣಿಗಾರಿಕೆ, ಕಾರ್ಖಾನೆಗಳು ಮತ್ತು ತಪ್ಪು ನೀರಾವರಿ ವಿಧಾನಗಳಂತಹ ಮಾನವ ಚಟುವಟಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಈ ಎಲ್ಲಾ ಕಾರಣಗಳಿಂದಾಗಿ ಈಗ ಅಲ್ಲಿನ ಮಣ್ಣು ತುಂಬಾ ವಿಷಕಾರಿಯಾಗಿದೆ.