Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅತ್ಯಮೂಲ್ಯ ಕಲ್ಲು ಸಂಪತ್ತಿನ ಲೂಟಿ-ಅಕ್ರಮ ಗಣಿಗಾರಿಕೆಗೆ ಕಠಿಣ ಎಚ್ಚರಿಕೆ

Spread the love

ಕಾರ್ಕಳ :ಪಶ್ಚಿಮಘಟ್ಟ ಸೆರಗಿನಲ್ಲಿರುವ ಕಾರ್ಕಳದ ಕರಿಯಕಲ್ಲು ಅತ್ಯಮೂಲ್ಯ ಕಪ್ಪು ಶಿಲೆಕಲ್ಲು ಹೊಂದಿರುವ ಊರು. ಹಲವಾರು ವರ್ಷಗಳಿಂದ ಇಲ್ಲಿ ಸರಕಾರದ ಅನುಮತಿಯಂತೆ ಗಣಿಗಾರಿಕೆ ನಡೆಯುತ್ತಿದ್ದರೆ, ಕೆಲವು ಕಡೆಗಳಲ್ಲಿ ಸರಕಾರ ಕೊಟ್ಟ ಅನುಮತಿಯನ್ನೇ ಮೀರಿ ಅತ್ಯಮೂಲ್ಯ ಕಲ್ಲು ಸಂಪತ್ತು ಲೂಟಿ ಹೊಡೆಯುವ ಕೆಲಸ ನಡೆಯುತ್ತಿದೆ.

ಈ ಬಗ್ಗೆ ಹಲವು ಬಾರಿ ದೂರುಗಳು ಕೇಳಿಬಂದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಅಕ್ರಮ ದಂಧೆಕೋರರು ಯಾವುದೇ ಭಯವಿಲ್ಲದೇ ಕಲ್ಲು ಲೂಟಿಯಲ್ಲಿ ತೊಡಗಿದ್ದರು. ಕೆಲವೊಮ್ಮೆ ಅಧಿಕಾರಿಗಳು ದಾಳಿ ನಡೆಸಿದಾಗ ಕೆಲವು ದಿನ ಲೂಟಿಕೋರರು ಸುಮ್ಮನಾಗುತ್ತಿದ್ದು, ಬಳಿಕ ಮತ್ತೆ ತಮ್ಮ ದಂಧೆಯನ್ನು ಆರಂಭಿಸುತ್ತಿದ್ದರು.

ಆದರೆ ಇತ್ತೀಚೆಗೆ ಕಳೆದೊಂದು ವಾರದಲ್ಲಿ ಅಕ್ರಮ ಗಣಿಗಾರಿಕೆ ಜಾಗಗಳ ಮೇಲೆ ಪೊಲೀಸ್‌ ಇಲಾಖೆ ದಾಳಿ ನಡೆಸಿ 10ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ಸರಕಾರಿ ಭೂಮಿಯನ್ನು ಬಗೆದು ಕೋಟ್ಯಂತರ ರೂ. ಮೌಲ್ಯದ ಕಲ್ಲುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಇದು ಹಲವು ವರ್ಷಗಳಿಂದ ನಡೆಯುತ್ತಿತ್ತು.

ಕಾರ್ಕಳ ಭಾಗದ ಕೆಲವು ಕಲ್ಲು ಕೋರೆಗಳಲ್ಲಿ ಸರಕಾರಿ ಅನುಮತಿ ವ್ಯಾಪ್ತಿಯನ್ನು ಮೀರಿ ಗಣಿಗಾರಿಕೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕಂದಾಯ, ಅರಣ್ಯ ಸಂಬಂಧಪಟ್ಟ ಇಲಾಖೆ ಜತೆಗೂಡಿ ಸಮರ್ಪಕ ಸರ್ವೇ ನಡೆಸಬೇಕು. ಡ್ರೋನ್‌ ಸರ್ವೆಯೂ ವೈಜ್ಞಾನಿಕ ಆಯಾಮದಲ್ಲಿ ನಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ, ಶಂಕರಬೆಟ್ಟು, ನಕ್ರೆ ಅಡಾªಲು ವರ್ಣಬೆಟ್ಟು, ಜಾರ್ಕಳ, ಎರ್ಲಪಾಡಿಯಲ್ಲಿ ಸರಕಾರಿ ಸರ್ವೆ ನಂಬರ್‌ 281, 245, 181/1 ರಲ್ಲಿ ವ್ಯಾಪಕವಾಗಿ ಗಣಿಗಾರಿಕೆ ನಡೆಸಲಾಗಿತ್ತು. ಇಲ್ಲಿಗೆ ಪೊಲೀಸರ ತಂಡ ದಾಳಿ ನಡೆಸಿದೆ. ವಾಹನಗಳು, ಗಣಿಗಾರಿಕೆ ಉಪಯೋಗಿಸುತ್ತಿದ್ದ ವಾಹನಗಳನ್ನು ಪೊಲೀ ಸರು ಜಪ್ತಿ ಮಾಡಿದ್ದಾರೆ. ಇನ್ನೂ ಹಲವೆಡೆ ಕಲ್ಲು ಗಣಿಗಾರಿಕೆ ಬಗ್ಗೆ ಸ್ಥಳ ತನಿಖೆ ನಡೆಸಿ ಅಕ್ರಮವಿದ್ದಲ್ಲಿ ಕೇಸು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಸಕ್ರಮವಾಗಿಯೇ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕೆಲವು ಕಡೆಗಳಲ್ಲಿ ಡೀಮ್ಡ್ ಅರಣ್ಯ ವ್ಯಾಪ್ತಿ ಘೋಷಣೆ ಬಳಿಕ ಈ ಭಾಗದ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಿಗೆ ನವೀಕರಣಕ್ಕೆ ತಡೆ ನೀಡಿತ್ತು. ಪರವಾನಿಗೆ ಇಲ್ಲದಿದ್ದರೂ ಕೆಲವು ಜಾಗದಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದಿತ್ತು.

ಹಿಂದೆ ಅನುಮತಿ ಇದ್ದ ಕೆಲವು ಲೀಸ್‌ ಹೋಲ್ಡರ್ಸ್‌ ಅವರು ಮತ್ತೆ ಅನುಮತಿಗಾಗಿ ಗಣಿ ಮತ್ತು ಭು ವಿಜ್ಞಾನ ಇಲಾಖೆ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ಗಣಿಗಾರಿಕೆ ನಡೆಯುವ ಜಾಗವನ್ನು ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಿಂದ ಹೊರಗಿಡುವಂತೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡು ಬಂದಿದ್ದಾರೆ. ಆದರೆ ಡೀಮ್ಡ್ ಫಾರೆಸ್ಟ್‌ ನಿಯಮಾವಳಿ ಸುಪ್ರೀಂ ಕೋರ್ಟ್‌ ಬಿಗಿಯಾಗಿ ರೂಪಿಸಿರುವುದರಿಂದ ಅರಣ್ಯ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಿತ ಎಲ್ಲ ಸಂಬಂಧಪಟ್ಟ ಇಲಾಖೆ ಇದನ್ನು ಪಾಲಿಸಬೇಕಿದೆ.

2015ರಲ್ಲಿ ಇಲಾಖೆಯಿಂದ ಜಂಟಿ ದಾಳಿ
ಅಕ್ರಮ ಗಣಿಗಾರಿಕೆಗಳ ಮೇಲೆ 2015ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಿ ಪ್ರಕರಣ ದಾಖಲಿಸಿ ಲಕ್ಷಾಂತರ ರೂ. ದಂಡ ವಿಧಿಸಲಾಗಿತ್ತು. ಆದರೂ ಕಳೆದ ಹತ್ತು ವರ್ಷಗಳಿಂದ ಇಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದಿದೆ. ಸ್ಥಳ ತನಿಖೆ ನಡೆಸಿದ್ದ ಗಣಿ ಇಲಾಖೆ ಅಧಿಕಾರಿಗಳು ಸರ್ವೆ ನಂಬರ್‌ 281 ಡೀಮ್ಡ್ ಅರಣ್ಯಕ್ಕೆ ಸೇರಿದ್ದು, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಗಣಿಗಾರಿಕೆ ಅವಕಾಶ ಇಲ್ಲ ಎಂದು ವರದಿ ಬರೆದಿದ್ದರು. ಅಯ್ಯಪ್ಪನಗರ ಸುತ್ತಮುತ್ತಲಿನ ಕರಿಕಲ್ಲಿನ ಗಣಿಗಾರಿಕೆ ಅತಿ ಸೂಕ್ಷ್ಮ ಗಣಿಗಾರಿಕೆಯಾಗಿದ್ದು, ಬೆಲೆಬಾಳುವ ಶಿಲೆಕಲ್ಲುಗಳಾಗಿವೆ ಎಂದು ಭೂವಿಜ್ಞಾನಿ ಕೋದಂಡರಾಮಯ್ಯ ಹೇಳಿದ್ದಾರೆ.

ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಸಮರ್ಪಕವಾಗಿ ಪರಿಶೀಲಿಸಿ ವರದಿ ನೀಡುವಂತೆ ಗಣಿ ಮತ್ತು ವಿಜ್ಞಾನ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಈಗಾಗಲೇ ಬ್ರಹ್ಮಾವರ ಮತ್ತು ಕಾರ್ಕಳ ಭಾಗದಲ್ಲಿ ಸ್ಥಳ ತನಿಖೆ ನಡೆಸಿ ಕೆಲವು ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಸರಕಾರಿ ಭೂಮಿಯಲ್ಲಿ ಪರವಾನಿಗೆ ಇಲ್ಲದ ಅಕ್ರಮ ಗಣಿಗಾರಿಕೆ ನಡೆಸುವರ ವಿರುದ್ದ, ಪರವಾನಿಗೆ ಪಡೆದು ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸುವರ ವಿರುದ್ದ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರಗಿಸಲಿದೆ.
– ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

ಅಕ್ರಮ ಗಣಿಗಾರಿಕೆ ಸಂಬಂಧಿಸಿ ಸರಕಾರಿ ಭೂಮಿಯಲ್ಲಿ ಪರವಾನಿಗೆ ಇಲ್ಲದೆ ಗಣಿ ಅಕ್ರಮ, ಕಲ್ಲು ಕಳವಿನಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸಿ, ವಾಹನ, ಇನ್ನಿತರ ಪರಿಕರ ವಶಕ್ಕೆ ಪಡೆದಿದ್ದೇವೆ. ಪ್ರಕರಣಗಳನ್ನೂ ದಾಖಲಿಸಿದ್ದೇವೆ. ಕಲ್ಲು ಗಣಿಗಾರಿಕೆ ಅಕ್ರಮಕ್ಕೆ ಸಂಬಂಧಿಸಿ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಮುಂದುವರಿಯಲಿದೆ.
– ಡಾ| ಹರ್ಷ ಪ್ರಿಯಂವದ, ಹೆಚ್ಚುವರಿ ಎಸ್‌ಪಿ ಕಾರ್ಕಳ


Spread the love
Share:

administrator

Leave a Reply

Your email address will not be published. Required fields are marked *