ಲಾಕ್ ಹಾಕಿದ ಗೋದಾಮಿನಿಂದ 400 ಕೆಜಿ ಕೂದಲು ಕಳವು – ಆರೋಪಿ ಅರೆಸ್ಟ್

ಬೆಂಗಳೂರು:ಬೆಂಗಳೂರಿನಲ್ಲಿ ಅಸಾಧಾರಣ ರೀತಿಯ ಕಳ್ಳತನವೊಂದು ಬೆಳಕಿಗೆ ಬಂದಿದೆ. ಲಕ್ಷ್ಮೀಪುರ ಕ್ರಾಸ್ನಲ್ಲಿರುವ ಗೋದಾಮೊಂದರಿಂದ 25 ಲಕ್ಷ ರೂಪಾಯಿ ಮೌಲ್ಯದ ಸುಮಾರು 400 ಕೆಜಿ ಕೂದಲನ್ನು ಕದ್ದ ಪ್ರಕರಣದಲ್ಲಿ ಸೋಲದೇವನಹಳ್ಳಿ ಪೊಲೀಸರು ಗದಗ ಮೂಲದ ಯಲ್ಲಪ್ಪ ಗೊಲ್ಲರ ( 40) ಎಂಬಾತನನ್ನು ಬಂಧಿಸಿದ್ದಾರೆ.

ಮಾರ್ಚ್ 1ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಯಲ್ಲಪ್ಪನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿ ಮೂಲತಃ ಕೂದಲು ಸಂಗ್ರಹಣೆ ಮಾಡುವುದನ್ನು ವೃತ್ತಿಯಾಗಿ ಮಾಡಿಕೊಂಡಿದ್ದ ವ್ಯಕ್ತಿಯಾಗಿದ್ದಾನೆ.
ಗೋದಾಮು ಮಾಲಿಕ ವೆಂಕಟರಮಣ ಅವರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣದ ತನಿಖೆ ಆರಂಭಿಸಲಾಯಿತು. ತನಿಖೆಯ ವೇಳೆ ಗೋದಾಮಿನಲ್ಲಿ ಬೀಗ ಮುರಿದುಕೊಂಡು ಗೂಡ್ಸ್ ವಾಹನದಲ್ಲಿ ಬಂದ 5 ಜನ ಆರೋಪಿಗಳ ತಂಡ ಕೂದಲು ಕಳವು ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಈ ಕಳ್ಳತನದಲ್ಲಿ ಕದ್ದ ಕೂದಲುಗಳನ್ನು ಚನ್ನರಾಯಪಟ್ಟಣ ಹಾಗೂ ಅಂಧ್ರಪ್ರದೇಶಗಳಿಗೆ ಸಾಗಿಸಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಈ ಕೂದಲುಗಳನ್ನು ಚೀನಾ, ಬರ್ಮಾ ಮತ್ತು ಹ್ಯಾಂಕಾಂಗ್ಗೆ ರಫ್ತು ಮಾಡಲಾಗಬೇಕಾಗಿತ್ತು.
ಇನ್ಸ್ಪೆಕ್ಟರ್ ರಘು ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿ, ಸಿಸಿಟಿವಿ ಹಾಗೂ ಇತರ ಮಾಹಿತಿ ಆಧಾರವಾಗಿ ಯಲ್ಲಪ್ಪ ಗೊಲ್ಲರ್ ಎಂಬಾತನನ್ನು ಬಂಧಿಸಲಾಗಿದೆ. ಉಳಿದ ನಾಲ್ಕು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಬೃಹತ್ ಮೌಲ್ಯದ ಕೂದಲನ್ನು ಕಳ್ಳತನ ಮಾಡಿದ ಘಟನೆ ಪೊಲೀಸ್ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದ್ದರೂ, ಪರಿಣಾಮಕಾರಿಯಾಗಿ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.
