ಈ ನಗರದಲ್ಲಿ 12 ಅಂಕೆ ಇಲ್ಲದ ಗಡಿಯಾರ ,11 ಅಂಕೆಯೊಂದಿಗೆ ಜೀವಿಸುವ ಅಪರೂಪದ ನಗರ!

ಈ ಜಗತ್ತಿನಲ್ಲಿ ನಮಗೆ ತಿಳಿಯದ ಅನೇಕ ವಿಷಯಗಳಿವೆ. ಒಂದೊಂದು ವಿಚಾರಗಳನ್ನು ತಿಳಿದುಕೊಂಡಾಗ ನಮ್ಮ ಉತ್ಸಾಹ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಕುತೂಹಲ ಕೂಡ ಜಾಸ್ತಿಯಾಗುತ್ತದೆ.

ಒಂದು ದೇಶದಲ್ಲಿ ಕೇವಲ 11 ಗಂಟೆಯ ಗಡಿಯಾರಗಳು ಮಾತ್ರ ಇವೆ. ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ, ಇದು ಸತ್ಯ. ಪ್ರಪಂಚದ ಎಲ್ಲ ದೇಶಗಳು 12 ಗಂಟೆಯ ಗಡಿಯಾರಗಳನ್ನು ಬಳಸುತ್ತವೆ ಅಂತ ನಾವು ಭಾವಿಸಿದ್ದೇವೆ. ಆದರೆ, 12 ಗಂಟೆಗಳಿಗಿಂತ ಒಂದು ಗಂಟೆ ಕಡಿಮೆ ಅಂದ್ರೆ 11 ಗಂಟೆಯ ಗಡಿಯಾರಗಳನ್ನು ಬಳಸುವ ದೇಶವೊಂದಿದೆ.
ವಾಯುವ್ಯ ಸ್ವಿಟ್ಜರ್ಲೆಂಡ್ನ ಸೊಲೊಥರ್ನ್ ನಗರದಲ್ಲಿ ಇಂತಹ ಒಂದು ಗಡಿಯಾರವಿದೆ ಎಂದು ಹೇಳಲಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.
ಸೊಲೊಥರ್ನ್ನ ಮಧ್ಯಭಾಗದಲ್ಲಿ ಪಟ್ಟಣದ ಚೌಕದ ಮುಂದೆ, 11 ಗಂಟೆಯ ಗಡಿಯಾರವಿದೆ. ಇದನ್ನು ನೋಡಲು ಅನೇಕ ದೇಶಗಳಿಂದ ಪ್ರವಾಸಿಗರು ಸೇರುತ್ತಾರೆ. ಅಲ್ಲಿನ ಗಡಿಯಾರದಲ್ಲಿ 12 ಸಂಖ್ಯೆ ಇರುವುದಿಲ್ಲ. ಅಂದಹಾಗೆ, ಅದು ಕೇವಲ ಗಡಿಯಾರ ಮಾತ್ರವಲ್ಲ, 11 ಸಂಖ್ಯೆಗೂ ಈ ನಗರಕ್ಕೂ ಇರುವ ಸಂಬಂಧದ ಪ್ರತೀಕವಾಗಿದೆ.
11ನೇ ಸಂಖ್ಯೆಯು ನಗರದ ಎಲ್ಲದಕ್ಕೂ ಸಂಬಂಧಿಸಿದೆ ಅಂತ ಅಲ್ಲಿನ ಜನರು ಹೇಳುತ್ತಾರೆ. ಉದಾಹರಣೆಗೆ, ಈ ನಗರದಲ್ಲಿ 11 ವಸ್ತುಸಂಗ್ರಹಾಲಯಗಳು, 11 ಚರ್ಚುಗಳು, 11 ಕಾರಂಜಿಗಳು ಮತ್ತು 11 ಸಂಖ್ಯೆಯನ್ನು ಹೊಂದಿರುವ ಇತರ ಅನೇಕ ವಸ್ತುಗಳು ಇವೆ. ರೋಮನ್ನರು ಸುಮಾರು 2,000 ವರ್ಷಗಳ ಹಿಂದೆ ಸೊಲೊಥರ್ನ್ ನಗರವನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಅದು ಹೆಚ್ಚು ಜನಪ್ರಿಯವಾಗದಿದ್ದರೂ, ಕಾಲಾನಂತರದಲ್ಲಿ 11 ಸಂಖ್ಯೆಯು ನಗರದೊಂದಿಗೆ ಸಂಬಂಧ ಹೊಂದಿತು.
1215 ರಲ್ಲಿ ಸೊಲೊಥರ್ನ್ನಲ್ಲಿ ಕೌನ್ಸಿಲರ್ಗಳನ್ನು ಆಯ್ಕೆ ಮಾಡಿದಾಗ, 11 ಪ್ರತಿನಿಧಿಗಳು ಇದ್ದರು ಎಂಬುದಕ್ಕೆ ಐತಿಹಾಸಿಕ ಪುರಾವೆಗಳಿವೆ. 1481ರಲ್ಲಿ ಸೊಲೊಥರ್ನ್ ಅನ್ನು ಸ್ವಿಸ್ ಒಕ್ಕೂಟಕ್ಕೆ 11ನೇ ಕ್ಯಾಂಟನ್ ಆಗಿ ಸೇರಿಸಲಾಯಿತು ಮತ್ತು 11 ನಗರ ಕಾವಲುಗಾರರನ್ನು ನೇಮಿಸಲಾಯಿತು. ಇದರ ನಂತರ, 15ನೇ ಶತಮಾನದ ಆರಂಭದಲ್ಲಿ ನಗರದಲ್ಲಿ ‘ಹೋಲಿ ಚರ್ಚ್ ಆಫ್ ಆರ್ಸಸ್’ ಅನ್ನು ನಿರ್ಮಿಸಲಾಯಿತು. ಇದು 11 ಬಾಗಿಲುಗಳು, 11 ಕಿಟಕಿಗಳು, 11 ಸಾಲುಗಳು ಮತ್ತು 11 ಗಂಟೆಗಳನ್ನು ಹೊಂದಿದೆ ಮತ್ತು ನಿರ್ಮಾಣದಲ್ಲಿ 11 ರೀತಿಯ ಕಲ್ಲುಗಳನ್ನು ಬಳಸಲಾಗಿದೆ.
ನಗರದಲ್ಲಿ ವಾಸಿಸುವ ಜನರು ಈ ಗಡಿಯಾರವು ನಗರದ ಸಂಖ್ಯೆ 11 ರೊಂದಿಗೆ ಅಂತಹ ನಿಕಟ ಸಂಬಂಧವನ್ನು ಹೊಂದಿದೆ ಎಂದು ನಂಬುತ್ತಾರೆ. ಗಡಿಯಾರವು 11 ಅಂಕೆಗಳನ್ನು ಹೊಂದಲು ಇದೇ ಕಾರಣ ಎಂದು ಹಲವರು ಹೇಳುತ್ತಾರೆ.
