ಫೇಲ್ ಆದ ವಿದ್ಯಾರ್ಥಿಗಳಿಗೆ ಪಾಠ – ಉಪನ್ಯಾಸಕರಿಗೆ ರಜೆ ಕಡಿತ

ಕೋಲಾರ: ದ್ವಿತೀಯ ಪಿಯು ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯಲು ಅನುವಾಗುವಂತೆ ಆಯಾಯ ಸರ್ಕಾರಿ ಪಿಯು ಕಾಲೇಜಿನಲ್ಲೇ ಪರಿಹಾರ ಬೋಧನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಉಪನ್ಯಾಸಕರಿಗೆ ಈ ಬಾರಿಯ ಬೇಸಿಗೆ ರಜೆ ಅವಧಿ ಕಡಿತಗೊಳಿಸಲಾಗಿದೆ. ಈ ಸಂಬಂಧ ಬುಧವಾರ ಇಲಾಖೆಯ ನಿರ್ದೇಶಕಿ ಗೂಗಲ್ ಮೀಟ್ ನಡೆಸಿ ಜಿಲ್ಲೆಯ ಡಿಡಿಪಿಯುಗೆ ಸೂಚನೆ ನೀಡಿದ್ದಾರೆ. ಈಗಾಗಲೇ ರಜೆಗೆ ತೆರಳಿದ್ದ ಉಪನ್ಯಾಸಕರಿಗೆ ಕಾಲೇಜಿಗೆ ಮರಳಿ ಪಾಠ ಮಾಡಲು ಸಿದ್ಧತೆ ನಡೆಸುವಂತೆ ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ಡಿಡಿಪಿಯು ಸಂದೇಶ ರವಾನಿಸಿದ್ದಾರೆ. ಏಪ್ರಿಲ್ 24ರಿಂದ ಮೇ 8ರವರೆಗೆ ದ್ವಿತೀಯ ಪಿಯು ಪರೀಕ್ಷೆ-2 ನಡೆಯಲಿದೆ. ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿದ್ದು, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಇಚ್ಛಿಸುವವರು ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ-1 ಬರೆಯಲು ಸಾಧ್ಯವಾಗದವರು ಪರೀಕ್ಷೆ-2 ಬರೆಯಬಹುದು.

‘ಜಿಲ್ಲೆಯಲ್ಲಿ 33 ಸರ್ಕಾರಿ ಪಿಯು ಕಾಲೇಜುಗಳಿದ್ದು, ಅಷ್ಟೂ ಕಾಲೇಜುಗಳಲ್ಲಿ ಪರಿಹಾರ ಬೋಧನೆ (ವಿಶೇಷ ತರಗತಿ) ನಡೆಸಲು ಸೂಚನೆ ಬಂದಿದೆ. ಅನುದಾನಿತ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ. ಹೀಗಾಗಿ, ಫೇಲ್ ಆದವರನ್ನು ನೋಂದಣಿ ಮಾಡಿಸಬೇಕು. ಪರೀಕ್ಷೆ-2 ಮುಗಿಯುವವರೆಗೆ ರಜೆ ರದ್ದುಗೊಳಿಸಲಾಗಿದೆ. ಆಯಾಯ ಕಾಲೇಜುಗಳಲ್ಲಿ ನಿತ್ಯ ಮೂರರಿಂದ ನಾಲ್ಕು ಗಂಟೆ ಪಾಠ ಮಾಡಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಬೇಕು’ ಎಂದು ಡಿಡಿಪಿಯು ಅಶೋಕ್ ಕುಮಾರ್ ಭಾವಗಿ ‘ಪ್ರಜಾವಾಣಿ’ಗೆ ತಿಳಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಇದೇ ಮೊದಲ ಬಾರಿ ವೆಬ್ ಕಾಸ್ಟಿಂಗ್ ಮಾಡಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದ ಕಾರಣ ಈ ಬಾರಿ ಫಲಿತಾಂಶ ಕುಸಿತವಾಗಿದೆ ಎಂಬುದು ಡಿಡಿಪಿಯು ಹಾಗೂ ಉಪನ್ಯಾಸಕರ ವಾದವಾಗಿದೆ. ಬೋಧಕ ವರ್ಗದ ತೀವ್ರ ಕೊರತೆ ಜಿಲ್ಲೆಯನ್ನು ಭಾದಿಸುತ್ತಿದೆ. 33 ಸರ್ಕಾರಿ ಕಾಲೇಜುಗಳಲ್ಲಿ 185 ಅತಿಥಿ ಉಪನ್ಯಾಸಕರೇ ಇದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯು ಶೇ 72.45 ಫಲಿತಾಂಶದೊಂದಿಗೆ 16ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಶೇ 86.12 ಫಲಿತಾಂಶದೊಂದಿಗೆ 12ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಹೊಸದಾಗಿ ಒಟ್ಟು 13,271 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 9,615 ಮಂದಿ ಉತ್ತೀರ್ಣರಾಗಿದ್ದಾರೆ. ‘ಮೊದಲು ಎಲ್ಲಾ ಉಪನ್ಯಾಸಕರ ಸಭೆ ಕರೆದು ಸಮಾಲೋಚನೆ ನಡೆಸಿ ಪರಿಹಾರ ಬೋಧನೆಗೆ ಟೈಮ್ ಟೇಬಲ್ ನಿಗದಿಪಡಿಸಲಾಗುವುದು. ಟೈಮ್ ಟೇಬಲ್ ಪ್ರಕಾರ ಉಪನ್ಯಾಸಕರನ್ನು ಕರೆಸಿ ಪಾಠ ಮಾಡಿಸಲಾಗುವುದು. ಸಾಮಾನ್ಯವಾಗಿ ಬೇಸಿಗೆ ರಜೆ ಏಪ್ರಿಲ್ ಆರಂಭದಿಂದ ಮೇ ಅಂತ್ಯದವರೆಗೆ ಇರುತ್ತದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದರೆ ದಾಖಲಾತಿಗಾಗಿ ಉಪನ್ಯಾಸಕರನ್ನು ಕರೆಸಿಕೊಳ್ಳುತ್ತೇವೆ. ಈಗ ವಿಶೇಷ ತರಗತಿ ನಡೆಸಲು ಉಪನ್ಯಾಸಕರು ಕಡ್ಡಾಯವಾಗಿ ಬರಲೇಬೇಕು. ಉಳಿದ ಕಾಲೇಜುಗಳಿಗೆ ಹೋಲಿಸಿದರೆ ನಮ್ಮ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬಂದಿದೆ’ ಎಂದು ಕೋಲಾರದ ಮಹಿಳಾ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಹೇಳಿದರು. ರಜೆ ಕಡಿತಗೊಳಿಸಿರುವುದಕ್ಕೆ ಕೆಲ ಉಪನ್ಯಾಸಕರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ, ಮೌಲ್ಯಮಾಪನ ಕಾರಣ ಈಗಾಗಲೇ ರಜೆ ಕಡಿತವಾಗಿದ್ದು, ಮತ್ತೆ ರಜೆ ಕಡಿತ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. -ಅಶೋಕ್ ಕುಮಾರ್ ಭಾವಗಿ ಡಿಡಿಪಿಯು ಕೋಲಾರಅನುತ್ತೀರ್ಣರಾದ ಮಕ್ಕಳನ್ನು ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ಸಜ್ಜುಗೊಳಿಸಲು ರಜೆ ರದ್ದುಗೊಳಿಸಿ ಪರಿಹಾರ ಬೋಧನೆ ಮಾಡಲು ಎಲ್ಲಾ ಉಪನ್ಯಾಸಕರಿಗೆ ಸೂಚನೆ ನೀಡಿದ್ದೇನೆ – ಬಾಲಕೃಷ್ಣ ಪ್ರಾಂಶುಪಾಲ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಕೋಲಾರಪರಿಹಾರ ಬೋಧನೆಗೆ ಡಿಡಿಪಿಯುನಿಂದ ಸೂಚನೆ ಬಂದಿದೆ. ಎಲ್ಲಾ ಉಪನ್ಯಾಸಕರಿಗೆ ಫೇಲ್ ಆದ ಮಕ್ಕಳಿಗೆ ಸಂದೇಶ ರವಾನಿಸಿದ್ದೇನೆ. ಟೈಮ್ ಟೇಬಲ್ ಸಿದ್ಧಪಡಿಸಿ ಪಾಠ ಆರಂಭಿಸುತ್ತೇವೆ ‘ಪಠ್ಯೇತರ’ ಚಟುವಟಿಕೆ; ಫಲಿತಾಂಶ ಕುಸಿತ ಕೋಲಾರ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಕುಸಿತದ ನಂತರ ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಜೊತೆಗೆ ಫಲಿತಾಂಶ ಹಿನ್ನೆಡೆಗೆ ಕಾರಣವಾದ ಅಂಶಗಳ ಹುಡುಕಾಟ ನಡೆಯುತ್ತಿದೆ.
ಸರ್ಕಾರಿ ಕಾಲೇಜುಗಳ ಕೆಲ ಉಪನ್ಯಾಸಕರ ‘ಪಠ್ಯೇತರ’ ಚಟುವಟಿಕೆಗಳು ಹೆಚ್ಚಾಗಿರುವುದು ಫಲಿತಾಂಶ ಕುಸಿತಕ್ಕೆ ಕಾರಣವೆಂಬ ಚರ್ಚೆಯೂ ಜೋರಾಗಿದೆ. ಕೆಲ ಉಪನ್ಯಾಸಕರು ಬಡ್ಡಿ ವ್ಯವಹಾರ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವುದು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿರುವುದರಿಂದ ಪಾಠ ಮಾಡುವುದರತ್ತ ಆಸಕ್ತಿ ಕಡಿಮೆ ಆಗಿದೆ ಎಂದು ಕೆಲ ಪೋಷಕರು ದೂರಿದ್ದಾರೆ. ಕಳೆದ ವರ್ಷ ಇಬ್ಬರು ಉಪನ್ಯಾಸಕರು ಕಾಲೇಜಿನಲ್ಲಿ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದರು. ಈ ಕುರಿತು ಪ್ರತಿಕ್ರಿಯಿಸಿಸಿ ಡಿಡಿಪಿಯು ಅಶೋಕ್ ಕುಮಾರ್ ಭಾವಗಿ ‘ಅಂಥ ಚಟುವಟಿಕೆಗಳು ನನ್ನ ಗಮನಕ್ಕೆ ಬಂದಿಲ್ಲ. ಜಿಲ್ಲೆಯಲ್ಲಿ ಫಲಿತಾಂಶ ಕುಸಿಯಲು ವೆಬ್ ಕಾಸ್ಟಿಂಗ್‌ನಿಂದ ಮಕ್ಕಳು ಆತಂಕಗೊಂಡಿದ್ದೇ ಪ್ರಮುಖ ಕಾರಣ’ ಎಂದರು.
