ವಿದ್ಯುತ್ ಇಲ್ಲದೆ ಬಳಸಬಹುದಾದ ಮಿನಿ ಕೂಲರ್ ತಯಾರಿಸಿದ 10ನೇ ಕ್ಲಾಸ್ ಬಾಲಕಿ

ಉತ್ತರ ಪ್ರದೇಶ :ಬೇಸಿಗೆ ಕಾಲದಲ್ಲಿ ವಿಪರೀತ ಸೆಕೆ. ತಾಪಮಾನ ಗರಿಷ್ಠತೆಯನ್ನು ಮುಟ್ಟುವ ಸಮಯ. ಹೀಗಿರುವಾಗ ಮನೆ ಅಥವಾ ಇತರೆ ಸ್ಥಳಗಳಲ್ಲಿ ಬೀಸಣಿಕೆ, ಫ್ಯಾನ್ ಅಥವಾ ಎಸಿ ಇರಲೇಬೇಕು. ಇಲ್ಲದಿದ್ದರೆ, ಬೆವರಿನ ಹನಿಗಳು ಮುಡಿಯಿಂದ ಕೆಳಗಿಳಿಯಲು ಶುರುವಾಗುತ್ತದೆ. ಈ ಸಮಯದಲ್ಲಿ ವಿದ್ಯುತ್ ಸಂಪರ್ಕ ಕೂಡ ಹೆಚ್ಚಾಗಿ ಕಡಿತಗೊಳ್ಳುತ್ತದೆ.

ಕಾರಣ, ಲೋಡ್ ಶೆಡ್ಡಿಂಗ್ ಸಮಸ್ಯೆ. ಇದರಿಂದ ಬಹುತೇಕ ಹಳ್ಳಿ-ಪಟ್ಟಣಗಳಲ್ಲಿ ಕರೆಂಟ್ ಸಂಪರ್ಕ ಇರುವುದೇ ಇಲ್ಲ. ದಿನದ ಅರ್ಧ ದಿನ ವಿದ್ಯುತ್ ಇಲ್ಲ ಎಂದರೂ ಅಚ್ಚರಿಯಿಲ್ಲ.
ಇಂತಹ ಸಮಸ್ಯೆಯನ್ನು ಎದುರಿಸಿದ ಉತ್ತರ ಪ್ರದೇಶದ ಬ್ರಹೈಚ್ನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು, ಪದೇ ಪದೇ ಕರೆಂಟ್ ಹೋಗುವುದರಿಂದ ಓದಲು ಕಷ್ಟವಾಗುತ್ತಿದೆ ಎಂದು ತನ್ನ ಮಿದುಳಿಗೆ ಕೆಲಸ ಕೊಟ್ಟಿದ್ದಾಳೆ. ಯುವ ಪ್ರತಿಭೆಯ ಚತುರತೆಯಿಂದ ವಿದ್ಯುತ್ ಸಂಪರ್ಕವಿಲ್ಲದ ಮಿನಿ ಕೂಲರ್ ಒಂದು ತಯಾರಾಗಿದೆ. ಕೇವಲ 250 ರೂ. ವೆಚ್ಚದಲ್ಲಿ ಇದನ್ನು ಪೂರ್ಣಗೊಳಿಸಿದ ವಿದ್ಯಾರ್ಥಿನಿ, ಎರಡರಿಂದ ಮೂರು ದಿನಗಳಲ್ಲಿ ಈ ಕೂಲರ್ನ ತಯಾರಿಸಿ, ಎಲ್ಲರ ಮುಂದೆ ಪರಿಚಯಿಸಿದ್ದಾಳೆ.
ವಿದ್ಯುತ್ ಇಲ್ಲದೆ ಒಂದಷ್ಟು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಕೂಲರ್, ಫ್ಯಾನ್ನಂತೆಯೇ ವೇಗದಲ್ಲಿ ಗಾಳಿ ಬೀಸುತ್ತದೆ ಎಂದು ಬಾಲಕಿ ಹೇಳಿದ್ದಾಳೆ. ಸೃಜನಶೀಲ ವಿದ್ಯಾರ್ಥಿನಿ ಪಮ್ಮಿಯನ್ನು ಶ್ಲಾಘಿಸಿದ ಗ್ರಾಮಸ್ಥರು, ಆಗಾಗ್ಗೆ ಕಡಿತಗೊಳ್ಳುವ ವಿದ್ಯುತ್ ಸಂಪರ್ಕ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ಎಂದು ಮೆಚ್ಚಿದ್ದಾರೆ.
ಅವಶ್ಯಕತೆಯಿಂದ ನಾವೀನ್ಯತೆ ಕಡೆಗೆ
ಬಹ್ರೈಚ್ ಜಿಲ್ಲೆಯ ಮೊಹಲ್ಲಾ ಬ್ರಹ್ಮಣಿಪುರದ ನಿವಾಸಿಯಾಗಿರುವ ಪಮ್ಮಿ, ತನ್ನ ಮನೆಯಲ್ಲಿ ಬಿದ್ದಿದ್ದ ಕೆಲವು ಬೇಡವಾದ ವಸ್ತುಗಳನ್ನು ಬಳಸಿಕೊಂಡು, ಅಷ್ಟರಲ್ಲೇ ಮಿನಿ ಕೂಲರ್ ಅನ್ನು ನಿರ್ಮಿಸಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ‘ಇದಕ್ಕೆ ಸುಮಾರು 2ರಿಂದ 3 ದಿನಗಳೇ ಬೇಕಾಯ್ತು. ಬೇಸಿಗೆಯಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆಗಳಿಗೆ ಇದು ಪರಿಹಾರ. ನನ್ನ ಓದಿನ ಸಮಯದಲ್ಲಿ ಕರೆಂಟ್ ಹೋದಾಗ ಈ ಮಿನಿ ಕೂಲರ್ನ ನಾನು ಬಳಸಿಕೊಳ್ಳುತ್ತಾನೆ. ಇದು ತಂಪಾದ ವಾತಾವರಣವನ್ನು ಸೃಷ್ಟಿಸುತ್ತಿದೆ’ ಎಂದಿದ್ದಾಳೆ,