ಸೃಜನಶೀಲತೆಯ ಶ್ರೇಷ್ಠ ಸ್ಮರಣೆ: ಶೀಲಾ ಗೌಡರಿಗೆ ‘ಸ್ಯಾಮ್ ಗಿಲ್ಲಿಯಾಮ್’ ಪ್ರಶಸ್ತಿ ಪುರಸ್ಕಾರ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಕಲಾಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ‘ಸ್ಯಾಮ್ ಗಿಲ್ಲಿಯಾಮ್ ಪ್ರಶಸ್ತಿ’ಗೆ 2025ನೇ ಸಾಲಿನಲ್ಲಿ ಕನ್ನಡತಿ ಕಲಾವಿದೆ ಶೀಲಾ ಗೌಡ ಅವರು ಭಾಜನರಾಗಿದ್ದಾರೆ.
ದಿಯಾ ಆರ್ಟ್ ಫೌಂಡೇಷನ್ ಮತ್ತು ಸ್ಯಾಮ್ ಗಿಲ್ಲಿಯಾಮ್ ಫೌಂಡೇಷನ್ ಜಂಟಿಯಾಗಿ ಈ ಪ್ರಶಸ್ತಿಯನ್ನು ನೀಡುತ್ತವೆ.
ಶೀಲಾ ಗೌಡ ಅವರು ಕಲಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ₹ 63.49 ಲಕ್ಷ (75000 ಡಾಲರ್) ಮೊತ್ತದ್ದಾಗಿದೆ. ಪ್ರಶಸ್ತಿಯ ಜೊತೆಗೆ, ದಿಯಾ ಆರ್ಟ್ ಫೌಂಡೇಷನ್‌ನ ವೇದಿಕೆಯಲ್ಲೂ ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

68 ವರ್ಷದ ಕ್ರಿಯಾಶೀಲ, ಸಮಕಾಲೀನ ಕಲಾವಿದೆ ಶೀಲಾ ಗೌಡ ಅವರು ಭದ್ರಾವತಿಯವರು. ಸದ್ಯ ಬೆಂಗಳೂರಿನ ನಿವಾಸಿ.
1979ರಲ್ಲಿ ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಕಲೆಗೆ ಸಂಬಂಧಿಸಿ ಪದವಿ ಹಾಗೂ ವಿಶ್ವಭಾರತಿ ವಿಶ್ವವಿದ್ಯಾಲಯದ ಶಾಂತಿನಿಕೇತನದಿಂದ 1982ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1986ರಲ್ಲಿ ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಲ್ಲಿ ಎಂ.ಎ ಪದವಿಯನ್ನೂ ಪಡೆದರು.
ಶೀಲಾ ಗೌಡ ಅವರು ಚಿತ್ರಕಲೆಯಷ್ಟೇ ಆಸಕ್ತಿಯನ್ನು ಶಿಲ್ಪ ಕಲಾಕೃತಿಗಳ ರಚನೆಯಲ್ಲೂ ಹೊಂದಿದ್ದರು. ಪ್ರತಿಷ್ಠಾಪನಾ ಕಲೆಯ ಬಗ್ಗೆಯೂ ವಿಶೇಷ ಆಸಕ್ತಿ ತೋರಿದರು. ಕೂದಲು, ಸಗಣಿ, ಧೂಪ, ಕುಂಕುಮದಂತಹ ಲಭ್ಯ ವಸ್ತುಗಳನ್ನು ಬಳಸಿಕೊಂಡು ಪ್ರತಿಷ್ಠಾಪನಾ ಕಲಾಕೃತಿಗಳನ್ನು ರಚಿಸಿದರು.
ಪೋಸ್ಟ್ ಮಿನಿಮಲಿಸಂ ಅವರ ಮತ್ತೊಂದು ಪ್ರಕಾರದ ಕಲಾಕೃತಿಗಳಾಗಿವೆ. ಅದರಲ್ಲೂ ವಿಶೇಷವಾಗಿ ಕಾರ್ಮಿಕರ ಅಥವಾ ಶ್ರಮಿಕ ಜೀವಿಗಳ ಮೇಲಿನ ಅವರ ಪ್ರೀತಿ, ಅವರಿಂದ ಪ್ರೇರಿತರಾಗಿ ರಚಿಸಿರುವ ಕಲಾಕೃತಿಗಳು ಅನೇಕರ ಮೆಚ್ಚುಗೆಗೆ ಕಾರಣವಾಗಿವೆ.
ಶೀಲಾ ಗೌಡ ಅವರ ಕಲಾಕೃತಿಗಳು ದೇಶ-ವಿದೇಶಗಳ ಅನೇಕ ಗ್ಯಾಲರಿಗಳಲ್ಲಿ, ಮ್ಯೂಸಿಯಂಗಳಲ್ಲಿ ಪ್ರದರ್ಶನಗೊಂಡಿವೆ. ಅವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇದೀಗ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿ ಅವರ ಮುಡಿಗೇರಿದೆ.
ಶೀಲಾ ಗೌಡ ಅವರ ಕಲಾಕೃತಿ2023ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಸ್ಯಾಮ್ ಗಿಲ್ಲಿಯಾಮ್ ಫೌಂಡೇಶನ್ ಅಧ್ಯಕ್ಷೆ ಮತ್ತು ಗಿಲ್ಲಿಯಾಮ್ ಪತ್ನಿ ಆನಿ ಗಾವ್ಲಾಕ್ ಅವರು ತಮ್ಮ ಫೌಂಡೇಶನ್ ವತಿಯಿಂದ ಪ್ರತಿವರ್ಷ ನೀಡಬೇಕೆಂದು ನಿರ್ಧರಿಸಿದರು. ಮೊದಲ ವರ್ಷದ ಪ್ರಶಸ್ತಿಯನ್ನು(2024ನೇ ಸಾಲಿನ) ಘಾನಾ ದೇಶದ ಇಬ್ರಾಹಿಂ ಮಹಿಮಾ ಅವರಿಗೆ ನೀಡಿ ಗೌರವಿಸಲಾಯಿತು. ದ್ವಿತೀಯ ವರ್ಷದ ಪ್ರಶಸ್ತಿಗೆ ಕನ್ನಡತಿ ಶೀಲಾ ಗೌಡ ಅವರ ಮುಡಿಗೇರಿದೆ.