ಹಾವೇರಿ: 20 ವರ್ಷಗಳ ಆಸ್ತಿ ವಿವಾದ – ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ತಾಯಿ ಮತ್ತು ಮಗನ ಭೀಕರ ಹತ್ಯೆ!

ಹಾನಗಲ್ (ಹಾವೇರಿ) : ಸುದೀರ್ಘ 20 ವರ್ಷಗಳ ಆಸ್ತಿ ವಿವಾದ ಹಾಗೂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಮತ್ತು ಮಗನನ್ನು ಕಲ್ಲಿನಿಂದ ಜಜ್ಜಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಪ್ರೇಮಾ ಬಡಿಗೇರ (55) ಹಾಗೂ ಅವರ ಮಗ ಅವಿನಾಶ್ ಬಡಿಗೇರ (35) ಹತ್ಯೆಯಾದ ದುರದೃಷ್ಟಕರ ತಾಯಿ-ಮಗ. ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ಕೊಲೆಗೈದ ಆರೋಪಿಗಳು.

ಮೃತ ಪ್ರೇಮಾ ಬಡಿಗೇರ ಕೆಇಬಿಯಲ್ಲಿ (KEB) ಉದ್ಯೋಗಿಯಾಗಿದ್ದರೆ, ಅವರ ಮಗ ಅವಿನಾಶ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ಕೂಸನೂರು ಗ್ರಾಮದಲ್ಲಿದ್ದ ಮನೆ ಹಾಗೂ 4 ಗುಂಟೆ ಖಾಲಿ ಜಾಗವನ್ನು ಆರೋಪಿ ತಿರಕಯ್ಯ ಹೀರೆಮಠ ಕುಟುಂಬಕ್ಕೆ ಪ್ರೇಮಾ ಮಾರಾಟ ಮಾಡಿದ್ದರು. ಆದರೆ ಹಣಕಾಸಿನ ವ್ಯವಹಾರ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ನಡುವೆ ಭಾರಿ ವಿವಾದ ಶುರುವಾಗಿತ್ತು. ಗ್ರಾಮಸ್ಥರು ಹಲವು ಬಾರಿ ರಾಜಿ ಪಂಚಾಯಿತಿ ನಡೆಸಿದರೂ ಸಮಸ್ಯೆ ಬಗೆಹರಿಯದೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಶುಕ್ರವಾರ ಈ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರೇಮಾ ಹಾಗೂ ಅವಿನಾಶ್ ಪರವಾಗಿ ತೀರ್ಪು ಬಂದಿತ್ತು. ತೀರ್ಪಿನ ಬಳಿಕ ಕೋರ್ಟ್ ಆದೇಶದಂತೆ ಕೂಸನೂರಿನಲ್ಲಿದ್ದ ಮನೆ ಖಾಲಿ ಮಾಡಿಸಲು ಪ್ರೇಮಾ ಮತ್ತು ಅವಿನಾಶ್ ಮಧ್ಯಾಹ್ನ 3:30 ರ ಸುಮಾರಿಗೆ ಗ್ರಾಮಕ್ಕೆ ಆಗಮಿಸಿದ್ದರು. ಮನೆ ಖಾಲಿ ಮಾಡಿಸುವ ವಿಚಾರಕ್ಕೆ ಎರಡೂ ಕಡೆಯವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿಗಳಾದ ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ದಾರಿಯಲ್ಲಿದ್ದ ಬೃಹತ್ ಕಲ್ಲುಗಳಿಂದ ತಾಯಿ-ಮಗನ ತಲೆ ಹಾಗೂ ಮುಖಕ್ಕೆ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಕೊಲೆ ಮಾಡಿದ ನಂತರ ಆರೋಪಿಗಳು ಮೃತದೇಹಗಳ ಮುಂಭಾಗದಲ್ಲೇ ಕುಳಿತು ನಿರಾಳವಾಗಿ ಊಟ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಕೃತ್ಯದ ವಿಕೃತಿಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಹತ್ಯೆಯಾದ ಅವಿನಾಶ್ ಪತ್ನಿ ಅಕ್ಷತಾ ಬಡಿಗೇರ್ ಪ್ರತಿಕ್ರಿಯಿಸಿ, “ನಮ್ಮ ಅತ್ತೆ ಮತ್ತು ತಿರಕಯ್ಯ ನಡುವೆ 20 ವರ್ಷಗಳಿಂದ ಜಗಳವಿತ್ತು. ಶುಕ್ರವಾರ ಮಧ್ಯಾಹ್ನ ಜಗಳವಾಗಿದೆ ಬನ್ನಿ ಎಂದು ಪತಿ ಫೋನ್ ಮಾಡಿದ್ದರು. ಬಂದು ನೋಡುವಷ್ಟರಲ್ಲಿ ನನ್ನ ಗಂಡ ಮತ್ತು ಅತ್ತೆಯನ್ನು ಕೊಂದು ಹಾಕಿದ್ದಾರೆ. ನನ್ನ ಪತಿ ಹಾಗೂ ಅತ್ತೆಯನ್ನು ಕೊಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ನನಗೂ ನನ್ನ ಮಗನಿಗೂ ನ್ಯಾಯ ಸಿಗಬೇಕು” ಎಂದು ಕಣ್ಣೀರಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ (SP) ಯಶೋಧಾ ವಂಟಗೋಡಿ ಮಾತನಾಡಿ, “ಆಸ್ತಿ ಜಗಳದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ. ಆರೋಪಿಗಳು ಕಲ್ಲಿನಿಂದ ಭೀಕರವಾಗಿ ಹೊಡೆದಿದ್ದರಿಂದ ತಾಯಿ-ಮಗ ಸ್ಥಳದಲ್ಲೇ ಅಸುನೀಗಿದ್ದಾರೆ. ಪ್ರಮುಖ ಆರೋಪಿ ತಿರಕಯ್ಯನನ್ನು ಈಗಾಗಲೇ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಬಸವರಾಜ್ ಬಂಧನಕ್ಕೆ ಬಲೆ ಬೀಸಲಾಗಿದೆ. ಶವದ ಮುಂದೆ ಊಟ ಮಾಡಿದ್ದಾರೆ ಎನ್ನಲಾದ ಆರೋಪ ಹಾಗೂ ಕೃತ್ಯಕ್ಕೆ ಇತರರು ಸಹಕರಿಸಿದ್ದಾರೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.