ಮಂಗಳೂರು: ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ತಲಪಾಡಿಯಲ್ಲಿ ಸೆರೆ!

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪಿಮೊಗರು ಮನೆಯೊಂದರಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸಮಧನ ಸಕಹರಿ ನರಳೆ (26) ಬಂಧಿತ ಆರೋಪಿ.ಆ. 4 ರಂದು ಮನೆಯಲ್ಲಿ ಯಾರು ಇಲ್ಲದೆ ವೇಳೆ ಕಳ್ಳರು ಮನೆಯ ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಆಯುಧದಿಂದ ಮುರಿದು ಒಳನುಗ್ಗಿದ್ದಾರೆ. ಬಳಿಕ ಮನೆಯ ಕಪಾಟಿನಲ್ಲಿದ್ದ 14 ಗ್ರಾಂ ಚಿನ್ನದ ಸರ, ತಲಾ 2 ಗ್ರಾಂ ತೂಕ ಇರುವ 2 ಉಂಗುರ ಹಾಗೂ 25,000ರೂ. ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 106/2026 ಕಲಂ 305(a),331(3) ಬಿ.ಎನ್.ಎಸ್ ಪ್ರಕರಣ ದಾಖಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆ.11 ರಂದು ನಗರದ ತಲಪಾಡಿಯ ಬಳಿ ಬಸ್ ಸ್ಟ್ಯಾಂಡ್ ಬಳಿ ಆರೋಪಿ ಇರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಆತನನ್ನು ವಶಕ್ಕೆ ಪಡೆಯಲಾಯಿತು. ಜೊತೆಗೆ ಕಳವು ಮಾಡಿರುವ ಸೊತ್ತುಗಳನ್ನು, ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.