ಭೂಕಂಪ ಭೀತಿಯಲ್ಲಿ ಪ್ರಕೃತಿಯ ಕೃಪೆ: ರಸ್ತೆಯಲ್ಲೇ ಹೆರಿಗೆ

ಬ್ಯಾಂಕಾಕ್: ಶುಕ್ರವಾರ ಸಂಭವಿಸಿದ ಭಾರೀ ಭೂಕಂಪನದಿಂದಾಗಿ (Earthquake) ಆಸ್ಪತ್ರೆ ಕಟ್ಟಡ ಧ್ವಂಸಗೊಂಡಿದ್ದರ ಪರಿಣಾಮ ಬ್ಯಾಂಕಾಕ್ನ (Bangkok) ರಸ್ತೆಯಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಪ್ರಸಂಗ ಕಂಡುಬಂದಿದೆ. ಮ್ಯಾನ್ಮಾರ್ನಲ್ಲಿ (Myanmar) ಸಂಭವಿಸಿದ ಭಾರೀ ಭೂಕಂಪನದ ಪರಿಣಾಮ ಬ್ಯಾಂಕಾಕ್ನ ಆಸ್ಪತ್ರೆಗಳು ತೆರವುಗೊಂಡಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ನಲ್ಲಿ ಕರೆತರುವಾಗ ಹೆರಿಗೆ ನೋವು ಶುರುವಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಸಹಾಯದಿಂದ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಸದ್ಯ ಭೂಕಂಪನದ ನಡುವೆ ತಾಯಿ ಮಗುವಿಗೆ ಜನ್ಮ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ಸಂಭವಿಸಿದ ಎರಡು ಭಾರಿ ಭೂಕಂಪನದಿಂದಾಗಿ ಬ್ಯಾಂಕಾಕ್ ಸೇರಿದಂತೆ ಸಾವಿನ ಸಂಖ್ಯೆ 1,000 ಗಡಿ ದಾಟಿದ್ದು, 2,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
