ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರ: ಜೂನ್ 27ರವರೆಗೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ತೀವ್ರಗೊಳ್ಳುತ್ತಿದ್ದು ಜೂ.24ರಿಂದ ಜೂ.27ರ ವರೆಗೆ ಭಾರೀ ಮಳೆಯಾಗಲಿದ್ದು, ವಿವಿಧ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಕರಾವಳಿ ತೀರದ ಜಿಲ್ಲೆಗಳ ವಾತಾವರಣ ಸಂಪೂರ್ಣ ಬದಲಾಗಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ತೀವ್ರಗೊಳ್ಳಲಿದೆ. ಜೂ.24ರಿಂದ ಕರಾವಳಿಯುದ್ದಕ್ಕೂ ವ್ಯಾಪಕ ಮಳೆ ಶುರುವಾಗಲಿದ್ದು, ಜೂ.27ರವರೆಗೆ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ 64.5 ಮಿಲಿಮೀಟರಿಂದ 115.5 ಮಿಲಿಮೀಟರ್ ವರೆಗಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮಲೆನಾಡಿನ ಭಾಗದಲ್ಲೂ ಮಳೆ ಜೋರಾಗಲಿದ್ದು, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಅಲ್ಲದೆ ಉತ್ತರ ಒಳನಾಡಿನ ವಿಜಯಪುರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜೂ.25ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
