ನವದೆಹಲಿ: ಸಿಧಿ ಜಿಲ್ಲೆಯಲ್ಲಿ 53 ಗರ್ಭಿಣಿಯರ ಸಾ*ವು; ಮಧ್ಯಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೋಟಿಸ್!

ಹೊಸದಿಲ್ಲಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 2025ರ ಎಪ್ರಿಲ್ ನಿಂದ 2026ರ ಮಾರ್ಚ್ ವರೆಗೆ ಹೆರಿಗೆಗೆ ಮೊದಲು, ಹೆರಿಗೆಯ ವೇಳೆ ಅಥವಾ ನಂತರ 53 ಮಹಿಳೆಯರು ಮೃತಪಟ್ಟಿರುವ ಕುರಿತು ಪ್ರಕಟವಾದ ಮಾಧ್ಯಮ ವರದಿಯ ಆಧಾರದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ.
ಸಿಧಿ ಜಿಲ್ಲೆಯಲ್ಲಿ ಸಂಭವಿಸಿರುವ ಹೆರಿಗೆಪೂರ್ವ ಮತ್ತು ಹೆರಿಗೆ ನಂತರದ ಸಾವುಗಳು ಮುಖ್ಯವಾಗಿ ಅರಿವಿನ ಕೊರತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಅಭಾವದಿಂದ ಉಂಟಾಗಿವೆ ಎಂದು ಆಯೋಗ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಮಾಧ್ಯಮದ ವರದಿಯಲ್ಲಿನ ಅಂಶಗಳು ಸತ್ಯವಾಗಿದ್ದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಯನ್ನು ಎತ್ತುತ್ತದೆ’ ಎಂದು ಆಯೋಗ ಹೇಳಿದೆ.
ರಾಜ್ಯ ಆರೋಗ್ಯ ಇಲಾಖೆಯ ಸಮುದಾಯ ಮಾತೃತ್ವ ಆರೋಗ್ಯ ಶ್ರೇಯಾಂಕದಲ್ಲಿ ಸಿಧಿ ಜಿಲ್ಲೆ ಸತತವಾಗಿ ಕೊನೆಯಲ್ಲಿರುವ ಮೂರು ಜಿಲ್ಲೆಗಳ ಪೈಕಿ ಒಂದಾಗಿದೆ. ಮೃತಪಟ್ಟ 53 ಮಹಿಳೆಯರ ಸರಾಸರಿ ವಯಸ್ಸು 26 ವರ್ಷಗಳಾಗಿದ್ದು, ಹೆಚ್ಚಿನವರು ಮೊದಲ ಅಥವಾ ಎರಡನೇ ಬಾರಿ ತಾಯಂದಿರಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆ ಇದೆ. ಇದರಿಂದ ಅನೇಕ ರೋಗಿಗಳನ್ನು ಉನ್ನತ ಚಿಕಿತ್ಸೆಗೆ ರೇವಾ ಜಿಲ್ಲೆಯ ವೈದ್ಯಕೀಯ ಕೇಂದ್ರಗಳಿಗೆ ಕಳುಹಿಸಬೇಕಾಗುತ್ತಿದ್ದು, ಸಾರಿಗೆ ವೇಳೆ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆಯೋಗ ಹೇಳಿದೆ.
ದೂರದ ಗ್ರಾಮಗಳ ಗರ್ಭಿಣಿಯರು ತೀವ್ರ ಸಾರಿಗೆ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಹಲವಾರು ಗ್ರಾಮಗಳಿಗೆ ಸಮರ್ಪಕ ರಸ್ತೆ ಸಂಪರ್ಕ ಇಲ್ಲದ ಕಾರಣ, ವಿಶೇಷವಾಗಿ ಮಳೆಗಾಲದಲ್ಲಿ ಮಹಿಳೆಯರನ್ನು ಆಂಬುಲೆನ್ಸ್ ತಲುಪುವ ಸ್ಥಳದವರೆಗೆ ಎರಡರಿಂದ ಮೂರು ಕಿಲೋಮೀಟರ್ ದೂರ ಹಾಸಿಗೆಗಳಲ್ಲಿ ಹೊತ್ತುಕೊಂಡು ಹೋಗಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
NHRCಯ ಕ್ರಮವನ್ನು ಸ್ವಾಗತಿಸಿರುವ ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನ ಉಮಂಗ್ ಸಿಂಘರ್, ಜಿಲ್ಲೆಯ ಆರೋಗ್ಯ ಸೇವೆಗಳ ದುಸ್ಥಿತಿಯ ಕುರಿತು ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳಗಳನ್ನು ಈ ಹಸ್ತಕ್ಷೇಪ ಸಮರ್ಥಿಸಿದೆ ಎಂದು ಹೇಳಿದ್ದಾರೆ.
ಸಿಧಿ ಜಿಲ್ಲೆಗೆ ಮಾತ್ರ ತನಿಖೆಯನ್ನು ಸೀಮಿತಗೊಳಿಸದೆ, ರಾಜ್ಯದಾದ್ಯಂತ ಮಾತೃ ಆರೋಗ್ಯ ಸೇವೆಗಳ ಉನ್ನತ ಮಟ್ಟದ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ವಕ್ತಾರ ಹಿತೇಶ್ ಬಾಜಪೈ, ಕಳೆದ ಎರಡು ದಶಕಗಳಲ್ಲಿ ಮಾತೃ ಮರಣ ಅನುಪಾತದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದರೂ, ದೂರದ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಸವಾಲುಗಳು ಮುಂದುವರಿದಿವೆ ಎಂದು ಹೇಳಿದ್ದಾರೆ.
ಸ್ತ್ರೀರೋಗ ತಜ್ಞರು, ಪ್ರಸೂತಿ ತಜ್ಞರು ಮತ್ತು ತರಬೇತಿ ಪಡೆದ ಶುಶೂಷಕಿಯರ ಕೊರತೆ ಹೆರಿಗೆಗಳನ್ನು ಸಂಕೀರ್ಣಗೊಳಿಸುತ್ತಿದೆ. ಗರ್ಭಿಣಿಯರಲ್ಲಿ ಕಂಡುಬರುವ ರಕ್ತಹೀನತೆ ಮತ್ತು ಅಪೌಷ್ಟಿಕತೆಯಂತಹ ಸಾರ್ವಜನಿಕ ಆರೋಗ್ಯ ಸಮಸ್ಯೆಗಳೂ ಮಾತೃ ಮರಣಕ್ಕೆ ಕಾರಣವಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಮೂಲಸೌಕರ್ಯ ವಿಸ್ತರಣೆ, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಲಭ್ಯತೆ ಹೆಚ್ಚಿಸುವ ಮೂಲಕ ಸರ್ಕಾರ ಈ ಸವಾಲುಗಳನ್ನು ಎದುರಿಸುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆ ಮತ್ತು ಪೌಷ್ಟಿಕಾಂಶದ ಮಟ್ಟ ಸುಧಾರಿಸುವತ್ತವೂ ಸರ್ಕಾರ ಗಮನ ಹರಿಸಿದೆ ಎಂದು ಬಾಜಪೈ ತಿಳಿಸಿದ್ದಾರೆ.