ಬುಡಗಾಂವ್: 12 ವರ್ಷದ ಬಾಲಕಿಯ ಅತ್ಯಾಚಾ*ರ, ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸ್ವಂತ ಹೆತ್ತವರೇ ಆಗ್ರಹ!

ಬುಡಗಾಂವ್ (ಕಾಶ್ಮೀರ): ದೇಶದಾದ್ಯಂತ ಈದ್-ಉಲ್-ಅಝಾ ಹಬ್ಬದ ಸಂಭ್ರಮ ಮನೆಮಾಡಿದ್ದರೆ, ಕೇಂದ್ರ ಕಾಶ್ಮೀರದ ಬುಡಗಾಂವ್ ಜಿಲ್ಲೆಯ ಗಲ್ವಾನ್‌ಪುರ ಗ್ರಾಮದಲ್ಲಿ ಎರಡು ಕುಟುಂಬಗಳು ಮಾತ್ರ ದುಃಖದ ಸಾಗರದಲ್ಲಿ ಮುಳುಗಿದ್ದವು. ಒಂದು ಕುಟುಂಬ 12 ವರ್ಷದ ಬಾಲಕಿಯನ್ನು ಕಳೆದುಕೊಂಡ ನೋವಿನಲ್ಲಿದ್ದರೆ, ಮತ್ತೊಂದು ಕುಟುಂಬ ತನ್ನ ಮಗನ ಮೇಲೆಯೇ ಆಕ್ರೋಶ ವ್ಯಕ್ತಪಡಿಸುತ್ತಿತ್ತು.
12 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ 30 ವರ್ಷದ ಮುದಸಿರ್ ಅಹ್ಮದ್ ಮೀರ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆತನ ಪೋಷಕರೇ ಆಗ್ರಹಿಸಿದ್ದಾರೆ.

‘ನನ್ನ ಮಗ ಕ್ಷಮೆಗೆ ಅರ್ಹನಲ್ಲ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆರೋಪಿಯ ತಂದೆ ಗುಲಾಂ ನಬಿ ಮೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಗನ ಕೃತ್ಯವನ್ನು ಖಂಡಿಸಿರುವ ತಾಯಿಯೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಸಂತ್ರಸ್ತ ಬಾಲಕಿಯ ಮನೆಯಲ್ಲಿ ಈದ್ ಹಬ್ಬದ ಸಂಭ್ರಮ ಕಾಣಿಸಲಿಲ್ಲ. ಬಾಲಕಿಗಾಗಿ ಖರೀದಿಸಿದ್ದ ಹೊಸ ಬಟ್ಟೆಗಳು ಮತ್ತು ಚಪ್ಪಲಿಗಳು ಹಾಗೆಯೇ ಉಳಿದಿದ್ದವು. ಕೆಲ ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದ ಬಾಲಕಿ ಮತ್ತೆ ಜೀವಂತವಾಗಿ ಮರಳಲಿಲ್ಲ.
‘ಈದ್ ಹಬ್ಬಕ್ಕಾಗಿ ಆಕೆ ಬಹಳ ಉತ್ಸುಕಳಾಗಿದ್ದಳು. ಆದರೆ ಹಬ್ಬ ಆಚರಿಸುವ ಬದಲು ಆಕೆಯ ಅಂತ್ಯಸಂಸ್ಕಾರ ನಡೆಸಬೇಕಾಯಿತು’ ಎಂದು ಕುಟುಂಬದ ಸದಸ್ಯರು ಕಣ್ಣೀರಿಟ್ಟರು.
ಆರೋಪಿ ಮತ್ತು ಸಂತ್ರಸ್ತೆಯ ಕುಟುಂಬಗಳು ಹಲವು ವರ್ಷಗಳಿಂದ ಪರಸ್ಪರ ಪರಿಚಿತವಾಗಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ಕಾಶ್ಮೀರದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಶೀಘ್ರ ಹಾಗೂ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಗಳು ಕೇಳಿಬರುತ್ತಿವೆ.