ಲಾಹೋರ್: 8 ದಶಕಗಳ ಬಳಿಕ ಇಸ್ಲಾಂಪುರಕ್ಕೆ ಮತ್ತೆ ‘ಕೃಷ್ಣ ನಗರ’ದ ಐತಿಹಾಸಿಕ ಹೆಸರು ಮರುಸ್ಥಾಪನೆ!

ಲಾಹೋರ್: ಭಾರತದ ವಿಭಜನೆಯ ಸುಮಾರು ಎಂಟು ದಶಕಗಳ ಬಳಿಕ ಪಾಕಿಸ್ತಾನದ ಲಾಹೋರ್ ನಗರದಲ್ಲಿ ವಿಭಜನೆ ಪೂರ್ವದ ಐತಿಹಾಸಿಕ ಹೆಸರುಗಳನ್ನು ಮತ್ತೆ ಮರುಸ್ಥಾಪಿಸುವ ಕಾರ್ಯ ಆರಂಭವಾಗಿದೆ. ಹಿಂದೂ, ಸಿಖ್, ಜೈನ ಹಾಗೂ ವಸಾಹತುಶಾಹಿ ಯುಗದ ನೆನಪುಗಳನ್ನು ಹೊತ್ತಿದ್ದ ಹಲವಾರು ಪ್ರದೇಶಗಳು, ಬೀದಿಗಳು ಮತ್ತು ರಸ್ತೆಗಳಿಗೆ ಹಳೆಯ ಹೆಸರುಗಳನ್ನು ಮರಳಿ ನೀಡಲಾಗುತ್ತಿದೆ ಎಂದು indiatoday.in ವರದಿ ಮಾಡಿದೆ.
ಇಸ್ಲಾಂಪುರ ಪ್ರದೇಶಕ್ಕೆ ಮತ್ತೆ ‘ಕ್ರಿಶನ್ ನಗರ’ ಎಂಬ ಹೆಸರು ನೀಡಲಾಗಿದೆ. ‘ಬಾಬರಿ ಮಸೀದಿ ಚೌಕ್’ ಈಗ ‘ಜೈನ ಮಂದಿರ ಚೌಕ್’ ಆಗಿ ಮರುನಾಮಕರಣಗೊಂಡಿದೆ. ‘ಸುನ್ನತ್ ನಗರ’ವನ್ನು ‘ಸಂತ ನಗರ’ ಎಂದು ಮರುಸ್ಥಾಪಿಸಲಾಗಿದೆ. ವಿವಿಧ ವರದಿಗಳ ಪ್ರಕಾರ ‘ಮುಸ್ತಫಾಬಾದ್’ ಪ್ರದೇಶಕ್ಕೂ ‘ಧರ್ಮಪುರ’ ಎಂಬ ಹಳೆಯ ಹೆಸರು ಮರಳಿದೆ.

ಪಾಕಿಸ್ತಾನದ ಪಂಜಾಬ್ ಸರಕಾರ ಲಾಹೋರ್ ನ ವಿಭಜನೆ ಪೂರ್ವದ ಪರಂಪರೆಯನ್ನು ಪುನರುಜ್ಜಿವನಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಮರಿಯಮ್ ನವಾಝ್ ಅಧ್ಯಕ್ಷತೆಯಲ್ಲಿ ನಡೆದ ಪಂಜಾಬ್ ಸಚಿವ ಸಂಪುಟ ಸಭೆಯಲ್ಲಿ ಲಾಹೋರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೂಲ ಹಾಗೂ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಪಂಜಾಬ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಲಾಹೋರ್ ನ ವಿವಿಧ ಭಾಗಗಳಲ್ಲಿ ಹಳೆಯ ಹೆಸರುಗಳನ್ನು ಒಳಗೊಂಡ ಹೊಸ ಫಲಕಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ 9 ಸ್ಥಳಗಳಿಗೆ ಅಧಿಕೃತವಾಗಿ ಹಳೆಯ ಹೆಸರುಗಳನ್ನು ಮರುಸ್ಥಾಪಿಸಲಾಗಿದೆ. ‘ಲಕ್ಷ್ಮಿ ಚೌಕ್’ಗೆ ಹಿಂದೆ ‘ಮೌಲಾನಾ ಜಾಫರ್ ಅಲಿ ಖಾನ್ ಚೌಕ್ ಎಂದು ಹೆಸರು ಬದಲಾಯಿಸಲಾಗಿತ್ತು. ‘ಡೇವಿಸ್ ರಸ್ತೆ’ಯನ್ನು ‘ಸರ್ ಆಗಾ ಖಾನ್ ರಸ್ತೆ’ ಎಂದು ಹಾಗೂ ‘ಕ್ರೀನ್ಸ್ ರಸ್ತೆ’ಯನ್ನು ‘ಫಾತಿಮಾ ಜಿನ್ನಾ ರಸ್ತೆ’ ಎಂದು ಕರೆಯಲಾಗುತ್ತಿತ್ತು. ಈಗ ಈ ಪ್ರದೇಶಗಳಿಗೂ ಹಳೆಯ ಹೆಸರುಗಳನ್ನು ಮರಳಿ ನೀಡಲಾಗುತ್ತಿದೆ.
ಲಾಹೋರ್ ನ ವಾಲ್ಡ್ ಸಿಟಿಯ ಮಾಜಿ ಮಹಾನಿರ್ದೇಶಕ ಹಾಗೂ LAHR ಕಾರ್ಯದರ್ಶಿ ಕಮ್ರಾನ್ ಲಶಾರಿ, “ಜನರು ಈಗಲೂ ಈ ಸ್ಥಳಗಳನ್ನು ಹಳೆಯ ಹೆಸರುಗಳಲ್ಲೇ ಕರೆಯುತ್ತಾರೆ” ಎಂದು ಹೇಳಿದ್ದಾರೆ. ಲಾಹೋರ್ ನ ಗುರುತು ಒಂದೇ ಸಮುದಾಯಕ್ಕೆ ಸೀಮಿತವಾಗಿರದೆ ಮುಸ್ಲಿಂ, ಹಿಂದೂ, ಸಿಖ್, ಕ್ರಿಶ್ಚಿಯನ್ ಹಾಗೂ ಪಾರ್ಸಿ ಪರಂಪರೆಗಳ ಸಮನ್ವಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅಮೃತಸರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಲಾಹೋರ್, ವಿಭಜನೆಗೂ ಮೊದಲು ಪಂಜಾಬಿನ ಸಾಂಸ್ಕೃತಿಕ ಕೇಂದ್ರವಾಗಿತ್ತು. ದೇವಾಲಯಗಳು, ಗುರುದ್ವಾರಗಳು, ಉದ್ಯಾನಗಳು, ಹಳೆಯ ಕಾಲೇಜುಗಳು ಹಾಗೂ ಅಖಾಡಗಳಿಂದ ಪ್ರಸಿದ್ಧಿಯಾಗಿದ್ದ ನಗರವು 1947ರ ವಿಭಜನೆಯ ಬಳಿಕ ದೊಡ್ಡ ಮಟ್ಟದ ಬದಲಾವಣೆಗೆ ಒಳಗಾಯಿತು. ಹಿಂಸಾಚಾರದ ನಡುವೆ ಅನೇಕ ಹಿಂದೂ ಮತ್ತು ಸಿಖ್ ಕುಟುಂಬಗಳು ನಗರ ತೊರೆಯಬೇಕಾಯಿತು. ನಂತರದ ದಶಕಗಳಲ್ಲಿ ಹಿಂದೂ, ಸಿಖ್ ಮತ್ತು ಬ್ರಿಟಿಷ್ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಸ್ಥಳಗಳ ಹೆಸರುಗಳನ್ನು ಬದಲಾಯಿಸಲಾಗಿತ್ತು.
ಕೃಷ್ಣ ನಗರವನ್ನು ‘ಇಸ್ಲಾಂಪುರ’ ಎಂದು, ಧರ್ಮಪುರವನ್ನು ‘ಮುಸ್ತಫಾಬಾದ್’ ಎಂದು ಹಾಗೂ ಜೈನ ಮಂದಿರ ರಸ್ತೆಯನ್ನು ‘ಬಾಬರಿ ಮಸೀದಿ ಚೌಕ್’ ಎಂದು ಮರುನಾಮಕರಣ ಮಾಡಲಾಗಿತ್ತು. ಆದರೆ ಸ್ಥಳೀಯರು ತಮ್ಮ ದೈನಂದಿನ ಬಳಕೆಯಲ್ಲಿ ಹಳೆಯ ಹೆಸರುಗಳನ್ನೇ ಮುಂದುವರಿಸಿದ್ದರು.
ಲಾಹೋರ್ ನಲ್ಲಿ 100ಕ್ಕೂ ಹೆಚ್ಚು ಗುರುತಿಸಲ್ಪಟ್ಟ ಪಾರಂಪರಿಕ ಕಟ್ಟಡಗಳಿವೆ. ವಸಾಹತುಶಾಹಿ ಕಾಲದ ಅನೇಕ ಕಟ್ಟಡಗಳ ಮರುಸ್ಥಾಪನಾ ಕಾರ್ಯ ನಡೆಯುತ್ತಿದೆ. ಮಹಾರಾಜ ರಂಜಿತ್ ಸಿಂಗ್ ಆಡಳಿತಕಾಲಕ್ಕೆ ಸಂಬಂಧಿಸಿದ ಸಿಖ್ ಯುಗದ ಕಟ್ಟಡಗಳು ಹಾಗೂ ಚರ್ಚ್‌ಗಳ ಸಂರಕ್ಷಣಾ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ.
ಲಾಹೋರ್ ಕೋಟೆಯಲ್ಲಿ ಸಿಖ್ ರಾಜವಂಶದ ಕೊನೆಯ ವಂಶಸ್ಥೆ ರಾಜಕುಮಾರಿ ಬಾಂಬಾ ಸದರ್ಲ್ಯಾಂಡ್ ಅವರ ಚಿತ್ರವನ್ನು ಮರು ಸ್ಥಾಪಿಸಲಾಗಿದೆ. ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಹಿಂದಿನ ಪ್ರಯತ್ನಗಳು ವಿಧ್ವಂಸಕ ಕೃತ್ಯಗಳಿಗೆ ಗುರಿಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ವಾತಾವರಣ ಹೆಚ್ಚು ಮುಕ್ತ ಹಾಗೂ ಎಲ್ಲರನ್ನು ಒಳಗೊಂಡಂತಾಗಿದೆ ಎಂದು ಕಮ್ರಾನ್ ಲಶಾರಿ ಹೇಳಿದ್ದಾರೆ.
ಈ ಪುನರುಜ್ಜಿವನ ಪ್ರಯತ್ನ ಲಾಹೋರ್ ನ ಕ್ರೀಡಾ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೂ ಹೊಸ ಚೈತನ್ಯ ನೀಡಿದೆ. ನವಾಝ್ ಷರೀಫ್, ಈಗ ‘ಗ್ರೇಟರ್ ಇಟ್ಬಾಲ್ ಪಾರ್ಕ್’ ಎಂದು ಕರೆಯಲ್ಪಡುವ ಮಿಂಟೋ ಪಾರ್ಕ್ ನ ಐತಿಹಾಸಿಕ ಕ್ರಿಕೆಟ್ ಮೈದಾನಗಳು ಮತ್ತು ಹಳೆಯ ಕುಸ್ತಿ ಅಖಾಡವನ್ನು ಮರುಸ್ಥಾಪಿಸುವ ಪ್ರಸ್ತಾಪ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವಿಭಜನೆಗೂ ಮೊದಲು ಈ ಮೈದಾನಗಳು ಅನೇಕ ಪ್ರಸಿದ್ಧ ಕ್ರಿಕೆಟಿಗರನ್ನು ರೂಪಿಸಿದ್ದವು. ಪಾಕಿಸ್ತಾನದ ಇಂಝಮಾಮ್-ಉಲ್-ಹಕ್ ಹಾಗೂ ಭಾರತದ ದಿಗ್ಗಜ ಲಾಲಾ ಅಮರನಾಥ್ ಅವರಂತಹ ಆಟಗಾರರು ಈ ಪರಂಪರೆಯ ಭಾಗವಾಗಿದ್ದರು. ಮಿಂಟೋ ಪಾರ್ಕ್ ನ ಅಖಾಡದಲ್ಲಿ ಗಾಮಾ ಪೆಹಲ್ವಾನ್ ಮತ್ತು ಇಮಾಮ್ ಬಕ್ಸ್ ಅವರಂತಹ ದಿಗ್ಗಜ ಕುಸ್ತಿಪಟುಗಳ ಪಂದ್ಯಗಳು ನಡೆಯುತ್ತಿದವು. ವಿಭಜನೆಗೂ ಮೊದಲು ಲಾಹೋರ್ ನ ಹಿಂದೂ ಕುಟುಂಬಗಳು ಇದೇ ಪ್ರದೇಶದಲ್ಲಿ ದಸರಾ ಹಬ್ಬವನ್ನು ಆಚರಿಸುತ್ತಿದ್ದವು.