ದೇಶದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲು ಪ್ರಧಾನಿ ಮೋದಿಗೆ ಶಾಸಕ ಅಶೋಕ್ ರೈ ಆಗ್ರಹ!

ಪುತ್ತೂರು: ದೇಶದ ಒಟ್ಟು ಸಂಪತ್ತು ಕೇವಲ ಮೂವರು ಉದ್ಯಮಿಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿದ್ದು, ಇದು ದೇಶದ ಭವಿಷ್ಯಕ್ಕೆ ದೊಡ್ಡ ಅಪಾಯ ತಂದೊಡ್ಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಿಜವಾದ ಆರ್ಥಿಕ ಪರಿಸ್ಥಿತಿ ಮತ್ತು ಖಜಾನೆಯ ಸ್ಥಿತಿಯ ಕುರಿತು ತಕ್ಷಣವೇ ‘ಶ್ವೇತಪತ್ರ’ ಹೊರಡಿಸಬೇಕು” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಲ್ಲಿನ ಗಾಂಧಿಕಟ್ಟೆ ಬಳಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
“ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯ ಪ್ರತಿಷ್ಠೆಗಾಗಿ ಈ ಪ್ರತಿಭಟನೆ ನಡೆಸುತ್ತಿಲ್ಲ. ಇದು ದೇಶದ ಜನಸಾಮಾನ್ಯರ ಮನಸ್ಸಿನ ವೇದನೆಯ ಪ್ರತೀಕವಾಗಿದೆ. ಬೆಲೆ ಏರಿಕೆ ಮತ್ತು ತಪ್ಪು ಆರ್ಥಿಕ ನೀತಿಗಳಿಂದಾಗಿ ಬಿಜೆಪಿ ಬೆಂಬಲಿಗರು ಸೇರಿದಂತೆ ಸಾಮಾನ್ಯ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗಿದೆ” ಎಂದು ಶಾಸಕರು ಹೇಳಿದರು. ಇದೇ ವೇಳೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ನೀಟ್’ (NEET) ಪರೀಕ್ಷಾ ಅಕ್ರಮದ ಕುರಿತು ಮಾತನಾಡಿದ ಅವರು, “ನೀಟ್ ಹಗರಣದಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಹೊಡೆತ ಬಿದ್ದಿದೆ. ಇದರ ಹಿಂದೆ ದೊಡ್ಡ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಇಡಿ (ED) ಮತ್ತು ಸಿಬಿಐ (CBI) ದಾಳಿ ನಡೆಸುವ ಮೋದಿ ಸರ್ಕಾರಕ್ಕೆ ಧೈರ್ಯವಿದ್ದರೆ, ಈ ನೀಟ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ” ಎಂದು ಸವಾಲು ಹಾಕಿದರು.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ತಟ್ಟೆ, ಜಾಗಟೆ ಬಡಿಯಲು ಕರೆ ನೀಡಿದ್ದರು. ಈಗ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ವಿರುದ್ಧ ನಾವು ಬಟ್ಟಲು ಬಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದನ್ನು ನಮಗೆ ಸ್ವತಃ ಪ್ರಧಾನಿಯವರೇ ಕಲಿಸಿಕೊಟ್ಟಿದ್ದಾರೆ” ಎಂದು ಶಾಸಕರು ಲೇವಡಿ ಮಾಡಿದರು. ಕೇಂದ್ರ ಸರ್ಕಾರ ಶೀಘ್ರವೇ ಎಚ್ಚೆತ್ತುಕೊಳ್ಳದಿದ್ದರೆ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.