ಭೋಜಶಾಲಾ ವಿವಾದ: ಹೈಕೋರ್ಟ್ ಮಹತ್ವದ ತೀರ್ಪು; ಇದು ಸರಸ್ವತಿ ದೇವಾಲಯ ಎಂದ ನ್ಯಾಯಪೀಠ

ಧಾರ್: ಧಾರ್ನಲ್ಲಿರುವ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ವಾಗ್ಗೇವಿ ಸರಸ್ವತಿ ದೇವಾಲಯವಾಗಿದ್ದು, ಅದರ ಧಾರ್ಮಿಕ ಸ್ವರೂಪ ‘ಭೋಜಶಾಲಾ’ ಎಂದು ದಾಖಲಾಗಿರುವುದಾಗಿ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಆದರೆ, ಮಸೀದಿ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಭೂಮಿಯನ್ನು ಹಂಚಿಕೆ ಮಾಡುವಂತೆ ಮುಸ್ಲಿಂ ಸಮುದಾಯವು ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದೆಂದು ನ್ಯಾಯಪೀಠ ಸೂಚಿಸಿದೆ.
ಭೋಜಶಾಲಾ-ಕಮಲ್ ಮೌಲಾ ಮಸೀದಿ ಸ್ಥಳವು 1958ರ ಕಾನೂನಿನ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದ್ದು, 1904ರ ಮಾರ್ಚ್ 18ರಿಂದಲೇ ಈ ಸ್ಥಳಕ್ಕೆ ಸಂರಕ್ಷಿತ ಸ್ಥಾನಮಾನವಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಸ್ಥಳದ ಧಾರ್ಮಿಕ ಸ್ವರೂಪವನ್ನು ‘ಭೋಜಶಾಲಾ’ ಎಂದು ದಾಖಲಿಸಲಾಗಿದ್ದು, ಅದನ್ನು ವಾಗ್ಗೇವಿ ಸರಸ್ವತಿ ದೇವಾಲಯವೆಂದು ಗುರುತಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸಲ್ಲಿಸಿದ್ದ ವರದಿಯನ್ನು ಪರಿಗಣಿಸಲು ಪೀಠ ನಿರಾಕರಿಸಿದೆ. ಎಎಸ್ಐ ವರದಿ ವಿಶ್ವಾಸಾರ್ಹತೆ ಮೂಡಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದರೂ, ಸ್ಮಾರಕದ ಸಂರಕ್ಷಣೆ ಮತ್ತು ಪಾಲನೆಗೆ ಸಂಬಂಧಿಸಿದಂತೆ ಎಎಸ್ಐಗೆ ಸಂಪೂರ್ಣ ಮೇಲ್ವಿಚಾರಣಾ ಅಧಿಕಾರ ಮುಂದುವರಿಯಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.